ಕಾಂಗ್ರೆಸ್ ಸರಕಾರದಿಂದ ಎಲ್ಲ ವರ್ಗದವರಿಗೂ ನ್ಯಾಯ: ಐವನ್ ಡಿಸೋಜ
ಉಡುಪಿ, ಅ.26: ಅಶಕ್ತರ, ಧ್ವನಿ ಇಲ್ಲದವರ ಪರವಾಗಿ ನಿಂತು ಅವರಿಗೆ ನೆರವು ನೀಡುವುದೇ ಕಾಂಗ್ರೆಸ್ ಪಕ್ಷದ ಮೂಲಧ್ಯೇಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಅವರು ರವಿವಾರ ಉಡುಪಿ ಪುರಭವನದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾಂಗ್ರೆಸ್ ಪಕ್ಷದ ಚಿಂತನೆ, ಧ್ಯೇಯದ ಪರವಾಗಿರುವ ಕಾರ್ಯಕ್ರಮಗಳು ನಿರಂತರವಾಗಿ ಜನ ಸಮೂಹದ ಮಧ್ಯೆ ನಡೆಸಿಕೊಂಡು ಬರಬೇಕಾಗಿದೆ. ಸಾಮಾಜಿಕ ನ್ಯಾಯ ಮರೆ ಮಾಚಿದರೆ ಅದು ಕಾಂಗ್ರೆಸ್ ಪಕ್ಷದ ಮೂಲ ಸಿದ್ದಾಂತಕ್ಕೆ ಮಾಡುವ ಅಪಚಾರವಾಗುತ್ತದೆ. ಅದೇ ಉದ್ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರವಿರುವ ರಾಜ್ಯಗಳಲ್ಲಿ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಗಣತಿಯನ್ನು ಕೈಗೊಳ್ಳಲಾಗಿದೆ. ಆ ಮೂಲಕ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸವ ಕಾರ್ಯ ನಡೆಸಲಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವವನ್ನು ಉಳಿಸುವ ಪುಣ್ಯದ ಕಾರ್ಯವಾಗಿದೆ. ಓರ್ವ ವ್ಯಕ್ತಿ ವರ್ಷದಲ್ಲಿ ಎರಡರಿಂದ ಮೂರು ಬಾರಿ ರಕ್ತದಾನ ಮಾಡಿದ್ದಲ್ಲಿ ಆತನ ಶಾರೀರಿಕ ಬೆಳವಣಿಗೆ ಆರೋಗ್ಯದಿಂದ ಇರಲು ಸಾಧ್ಯವಿದೆ. ನಮ್ಮ ದೇಹದಿಂದ ದಾನ ಮಾಡುವ ರಕ್ತ ಯಾವುದೇ ಜಾತಿ ಧರ್ಮದ ಗೋಡೆಗಳಿಲ್ಲ ಯಾರಿಗೆ ಅಗತ್ಯವಿದೆಯೋ ಅವರಿಗೆ ಅದನ್ನು ಉಪಯೋಗಿಸಲಾಗುತ್ತದೆ. ಇಂತಹ ಪುಣ್ಯದ ಕಾರ್ಯದಲ್ಲಿ ತೊಡಗುವುರೊಂದಿಗೆ ಮತ್ತೊಂದು ಜೀವ ಉಳಿಸಿದ ಧನ್ಯತಾ ಭಾವ ಸಿಗುತ್ತದೆ ಎಂದರು.
ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಹಿಂದು ಮಹಿಳೆಯರು ಮಕ್ಕಳನ್ನು ಹೇರಬೇಕು ಎಂದು ಪ್ರಚೋದನಕಾರಿಯಾಗಿ ಮಾತನಾಡುವವರಿಗೆ ಎಷ್ಟು ಮಕ್ಕಳಿದ್ದಾರೆ ಎಂದು ಮಹಿಳೆಯರು ಕೇಳುತ್ತಿ ದ್ದಾರೆ. ಇವರಿಗೆ ಮಕ್ಕಳನ್ನು ಹೆತ್ತು ಹೊತ್ತು ಗೊತ್ತಿಲ್ಲ. ಆದರೂ ಪ್ರಚೋದನ ಕಾರಿಯಾಗಿ ಮಾತನಾಡಿ ಧ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ನೇಮಕಗೊಂಡ ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಬೀಜ ಮತ್ತು ಸಾವಯವ ಪ್ರಾಮಾಣಿಕರಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೊ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ದಾಸ್, ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಹಾಗೂ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು.
ಆಯ್ದ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ ಮಾಡಲಾಯಿತು. ರಕ್ತದಾನ ಶಿಬಿರದಲ್ಲಿ 238 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ವಹಿಸಿದ್ದರು.
ಕಾಂಗ್ರೆಸ್ ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ರಾಜು ಪೂಜಾರಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಹೆಬ್ಬಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ರಮೇಶ್ ಕಾಂಚನ್, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಪಿ. ಶೆಟ್ಟಿ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಬಾಬು ಪೂಜಾರಿ ಉಪಸ್ಥಿತರಿದ್ದರು.