×
Ad

ಆಧ್ಯಾತ್ಮಿಕ ತಳಹದಿಯಲ್ಲಿ ವಿದ್ಯೆಗಳ ಕಲಿಕೆ ಅಗತ್ಯ: ಪುತ್ತಿಗೆಶ್ರೀ

Update: 2025-10-27 20:19 IST

ಉಡುಪಿ, ಅ.27: ಭಾರತೀಯ ಸಾಂಸ್ಕೃತಿಕ ಮೌಲ್ಯ, ಚಿಂತನೆಗಳಿಗೆ ಇಂದು ಜಾಗತಿಕ ಮಾನ್ಯತೆ ದೊರಕಿದೆ. ಆದ್ದರಿಂದ ನಮ್ಮ ಆಧ್ಯಾತ್ಮಿಕ ತಳಹದಿಯಲ್ಲಿ ಎಲ್ಲ ವಿದ್ಯೆಗಳ ಅಳವಡಿಕೆ, ಕಲಿಕೆಯ ಅಗತ್ಯವಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣಮಠ, ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥಾ ಕೇಂದ್ರ ಹಾಗೂ ಉಡುಪಿಯ ಶ್ರೀವಾದಿರಾಜ ಸಂಶೋಧನ ಪ್ರತಿಷ್ಠಾನಗಳ ಸಹಯೋಗದಲ್ಲಿ ಗೀತಾಮಂದಿರದ ಶ್ರೀಪುತ್ತಿಗೆ ನೃಸಿಂಹ ಸಭಾಭವನದಲ್ಲಿ ಇಂದು ನಡೆದ ‘ಭಾರತೀಯ ದರ್ಶನಗಳಲ್ಲಿ ದೇವಾಲಯಗಳ ಪ್ರಾಮುಖ್ಯತೆ’ ವಿಷಯದ ಕುರಿತ ಸಂಶೋಧನಾತ್ಮಕ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಋಷಿಮುನಿಗಳು ಉನ್ನತಿಗೆ ತಲುಪಿಸಿದ ಭಾರತೀಯ ಜ್ಞಾನ ಪರಂಪರೆ ಯನ್ನು ಮೂಲದಲ್ಲೇ ಅಜ್ಞಾನ ಆವರಿಸ ದಂತೆ ಅಮೂಲ್ಯ ಜ್ಞಾನವನ್ನು ನಮ್ಮದಾಗಿಸಿಕೊಳ್ಳಬೇಕು. ಹಿಂದೆಲ್ಲಾ ಜೀವನ ಅಧ್ಯಾತ್ಮ ಕೇಂದ್ರಿತ ಹಾಗೂ ಸಮಾಜ ವ್ಯವಸ್ಥೆ ದೇವಸ್ಥಾನ ಕೇಂದ್ರಿತವಾಗಿತ್ತು. ಸಮತೋಲನ ಮತ್ತು ಸಮತ್ವವೇ ಭಾರತೀಯ ತತ್ವಶಾಸ್ತ್ರದ ಮೂಲ ತತ್ವವಾಗಿದೆ ಎಂದು ಪುತ್ತಿಗೆಶ್ರೀಗಳು ತಿಳಿಸಿದರು.

ನಿಟ್ಟೆ ವಿವಿ ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಪ್ರತಿ ದೇವಳವೂ ಪ್ರಾಚೀನ ವಿವಿಗಳಿದ್ದಂತೆ. ದೇಶದಲ್ಲಿ 1,200 ವಿವಿ, 50,000 ಕಾಲೇಜುಗಳು ಶೈಕ್ಷಣಿಕ ಕಾರ್ಯಕ್ರಮ ವನ್ನು ವಿನ್ಯಾಸಗೊಳಿಸಿ ನೀಡುವುದಕ್ಕೆ ಸೀಮಿತವಾಗಿವೆ. ಹಿಂದೆ ದೇವಾಲಯ ಗಳು ನೃತ್ಯ, ಸಂಗೀತ, ತತ್ವಶಾಸ್ತ್ರ, ವಾಸ್ತುಶಿಲ್ಪ, ಕಲೆ, ಸಂಶೋಧನೆ ಕೇಂದ್ರಗಳಾಗಿದ್ದವು ಎಂದರು.

ನಿಟ್ಟೆ ವಿವಿ 160ಕ್ಕೂ ಅಧಿಕ ಕೋರ್ಸ್‌ಗಳನ್ನು ಹೊಂದಿದ್ದು ಭಾರತೀಯ ಜ್ಞಾನ ಪರಂಪರೆಯ ಒಂದಾದರೂ ಪಠ್ಯ ಕಲಿಕಾ ವ್ಯವಸ್ಥೆ ಜಾರಿ ಯೋಜನೆ ರೂಪಿಸಲಾಗಿದೆ ಎಂದು ಡಾ.ಮೂಡಿತ್ತಾಯ ವಿವರಿಸಿದರು.

ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಹಿರಿಯ ಸಂಶೋಧಕ ಪ್ರೊ.ಪಿ.ಶ್ರೀಪತಿ ತಂತ್ರಿ, ಪುತ್ತಿಗೆ ಶಾಖಾ ಮಠಗಳ ಅಂತಾರಾಷ್ಟ್ರೀಯ ಕಾರ್ಯದರ್ಶಿ ಎಂ.ಪ್ರಸನ್ನಾಚಾರ್ಯ, ಪುರಾತತ್ವ ಶಾಸ್ತ್ರಜ್ಞ ಕೆ.ಕೆ.ಮೊಹಮ್ಮದ್, ಬರಹಗಾರ ಸುರೇಂದ್ರನಾಥ್ ಬೊಪ್ಪರಾಜು ಉಪಸ್ಥಿತರಿದ್ದರು.

ರಮಣ ಆಚಾರ್ಯ ಪ್ರಾರ್ಥಿಸಿದರು. ವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಡಾ.ವಿ.ಗೋಪಾಲಾ ಚಾರ್ಯ ಕಾರ್ಯಕ್ರಮ ನಿರೂಪಿಸಿದರು. ನಿಟ್ಟೆ ವಿವಿಯ ಭಾರತೀಯ ಜ್ಞಾನ ವ್ಯವಸ್ಥಾ ಕೇಂದ್ರದ ನಿರ್ದೇಶಕ ಡಾ. ಸುಧೀರ್‌ರಾಜ್ ಸ್ವಾಗತಿಸಿ, ವಂದಿಸಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News