ಮಟ್ಟು ಬೀಚ್ ಬಳಿ ಕಡಲ್ಕೊರೆತ: ಶಾಸಕರಿಂದ ಪರಿಶೀಲನೆ
Update: 2025-10-27 20:20 IST
ಕಾಪು, ಅ.27: ಚಂಡಮಾರುತದ ಪರಿಣಾಮವಾಗಿ ಹಾಗೂ ಕೆಲ ದಿನಗಳಿಂದ ಸುರಿಯುತ್ತಿರುವ ಗಾಳಿಮಳೆಯಿಂದ ಕಡಲು ಪ್ರಕ್ಷುಬ್ಧಗೊಂಡಿದ್ದು, ಇದರಿಂದ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಬೀಚ್ ಬಳಿ ಕಡಲ್ಕೊರೆತ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಈಗಾಗಲೇ ಹಲವು ಪ್ರದೇಶ ಸಮುದ್ರ ಪಾಲಾಗಿದ್ದು, ತೆಂಗಿನಮರಗಳು ಕಡಲ ಒಡಲು ಸೇರುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೋಮವಾರ ಕಡಲ್ಕೊರೆತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕರು ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳಿಗೆ ಕರೆ ಮಾಡಿ ತುರ್ತು ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು ಹಾಗೂ ಶಾಶ್ವತ ಪರಿಹಾರಕ್ಕೆ ಸಚಿವರ ಬಳಿ ಚರ್ಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೋಟೆ ಗ್ರಾಪಂ ಉಪಾಧ್ಯಕ್ಷ ಯೋಗೀಶ್, ಗ್ರಾಮ ಪಂಚಾಯತ್ ಸದಸ್ಯರಾದ ರತ್ನಾಕರ್ ಕೋಟ್ಯಾನ್, ನಾಗರಾಜ್ ಮೆಂಡನ್, ಶಕ್ತಿ ಕೇಂದ್ರದ ಹರ್ಷಿತ್ ಹಾಗೂ ಗಣೇಶ್ ಮಟ್ಟು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.