×
Ad

ಕಲಾವಿದ ಅಜ್ರಿ ಗೋಪಾಲ ಗಾಣಿಗರಿಗೆ ಯಕ್ಷ ಪ್ರಶಸ್ತಿ ಪ್ರದಾನ

Update: 2025-10-28 21:04 IST

ಉಡುಪಿ, ಅ.28: ಯಕ್ಷಗಾನ ಕಲೆಯ ಉಳಿವು ಬೆಳವಣಿಗೆಯ ದೃಷ್ಟಿಯಿಂದ ಸಂಘ ಸಂಸ್ಥೆಗಳ ಪ್ರೋತ್ಸಾಹ ಅತ್ಯಗತ್ಯ. ಅದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠ, ತಲ್ಲೂರ್ಸ್‌ ಫ್ಯಾಮಿಲಿ ಟ್ರಸ್ಟ್ ಉಡುಪಿ, ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಹಾಗೂ ದ್ಯುತಿಪರ್ವ ಯಕ್ಷ ಟ್ರಸ್ಟ್ ಕುಂದಾಪುರ ಇವುಗಳ ಸಂಯುಕ್ತ ಸಹಭಾಗಿತ್ವದಲ್ಲಿ ಹಟ್ಟಿಯಂಗಡಿ ಶ್ರೀಸಿದ್ಧಿ ವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಂಡ 5 ದಿನಗಳ ಯಕ್ಷಗಾನ ಪ್ರದರ್ಶನ ’ಯಕ್ಷ ಪಂಚಮಿ-2025’ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡುತಿದ್ದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಹಾಗೂ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಯಕ್ಷಗಾನಕ್ಕೆ ಇಂದು ಶಿಕ್ಷಕರು, ಇಂಜೀನಿಯರ್‌ಗಳು, ವೈದ್ಯರು ಸೇರಿದಂತೆ ಸುಶಿಕ್ಷಿತ ಬುದ್ದಿ ಜೀವಿಗಳು ಬರುತ್ತಿದ್ದಾರೆ. ಕಲೆಯ ಬೆಳವಣಿಗೆಯ ದೃಷ್ಟಿಯಿಂದ ಇದು ಸ್ವಾಗತಾರ್ಹವಾದರೂ, ಯಕ್ಷಗಾನವನ್ನು ಸಂಪ್ರದಾಯ ಚೌಕಟ್ಟಿನೊಳಗೆ ಬೆಳೆಸಿದ ಹಿರಿಯ ಕಲಾವಿದರನ್ನು ಗುರುತಿಸಿ, ಸನ್ಮಾನಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಉದ್ಯಮಿ ಗೋಪಾಲ ಸಿ. ಬಂಗೇರ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಅಜ್ರಿ ಗೋಪಾಲ ಗಾಣಿಗ ಅವರಿಗೆ ತಲ್ಲೂರ್ಸ್ ಪ್ಯಾಮಿಲಿ ಟ್ರಸ್ಟ್ ಯಕ್ಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮಠದ ದಿವಾನರಾದ ನಾಗರಾಜ ಆಚಾರ್ಯ, ರಂಗಭೂಮಿ ಉಡುಪಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಗಿರಿಜಾ ಹೆಲ್ತ್ ಕೇರ್‌ಆಂಡ್ ಸರ್ಜಿಕಲ್‌ನ ರವೀಂದ್ರ ಶೆಟ್ಟಿ, ನಿವೃತ್ತ ರೈಲ್ವೆ ಉದ್ಯೋಗಿ ರಘುನಾಥ ನಾಯಕ್ ಶುಭ ಹಾರೈಸಿದರು.

ಹಟ್ಟಿಯಂಗಡಿ ಶ್ರೀಸಿದ್ಧಿ ವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿಯ ಪ್ರವರ್ತಕ ರಂಜನ್ ಕುಮಾರ್ ಶೆಟ್ಟಿ ವಕ್ವಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀ ನಾರಾಯಣ ಉಪಾಧ್ಯ, ಪುತ್ತಿಗೆ ಮಠದ ರಮೇಶ್ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News