×
Ad

ಉಡುಪಿ| ಸರಕಾರಿ ಬಸ್‌ಗಳ ಓಡಾಟಕ್ಕೆ ಖಾಸಗಿ ಬಸ್ ಮಾಲಕರ ಆಕ್ಷೇಪ: ಆರ್‌ಟಿಎ ಸಭೆಯಲ್ಲಿ ಸಾರ್ವಜನಿಕರ ಆಕ್ರೋಶ

Update: 2025-10-29 20:20 IST

ಉಡುಪಿ, ಅ.29: ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ 12 ರೂಟ್ ಗಳಲ್ಲಿ ತಾತ್ಕಾಲಿಕ ಪರವಾನಿಗೆ ನೀಡುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಹಾಲ್‌ನಲ್ಲಿ ಬುಧವಾರ ನಡೆದ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಖಾಸಗಿ ಬಸ್ ಮಾಲಕರು ಆಕ್ಷೇಪಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾತನಾಡಿ, ಸಾರ್ವಜನಿಕರ ಬೇಡಿಕೆಯಂತೆ 12 ರೂಟ್‌ಗಳಲ್ಲಿ ಸರಕಾರಿ ಬಸ್ ಓಡಿಸಲು ತಾತ್ಕಾ ಲಿಕ ನೆಲೆಯಲ್ಲಿ ಪರವಾನಿಗೆ ಕೇಳಲಾಗಿತ್ತು. ಆದರೆ ಇದಕ್ಕೆ ಖಾಸಗಿ ಬಸ್ ಮಾಲಕರು ಹೈಕೋರ್ಟ್ ಮೂಲಕ ತಡೆಯಾಜ್ಞೆ ತಂದಿದ್ದಾರೆ. ಇದರಿಂದ ಸಮಸ್ಯೆ ಆಗುತ್ತಿದೆ ಎಂದರು.

ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕರು ಖಾಸಗಿ ಬಸ್ ಮಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಸಾರಿಗೆ ಸಮಸ್ಯೆಗಳನ್ನು ಖಾಸಗಿ ಬಸ್ ಮಾಲಕರು ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಖಿಲ ಭಾರತ ಜನವಾದಿ ಮಹಿಳಾ ಸಂಘದ ಶೀಲಾವತಿ ಮಾತನಾಡಿ, ಆಳೂರು, ಪದುಕೋಣೆ, ನಾಡ, ಬಡಕೆರೆ, ಹಕ್ಲಾಡಿ, ಶಿರೂರು ಹಾಗೂ ದೊಂಬೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನಿಯಮಿತ ಬಸ್ ಸೇವೆಯಿಲ್ಲದ ಕಾರಣ ಜನರು, ವಿಶೇಷವಾಗಿ ಗರ್ಭಿಣಿಯರು, ರೋಗಿಗಳು ಮತ್ತು ವಿದ್ಯಾರ್ಥಿಗಳು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಶಶಿಧರ ಗೊಲ್ಲ ಮಾತನಾಡಿ, ಖಾಸಗಿ ಬಸ್ ಚಾಲಕರು ಮತ್ತು ನಿರ್ವಹಕರು ವಿದ್ಯಾರ್ಥಿಗಳನ್ನು ಹೀನಾಯವಾಗಿ ನೋಡುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಫುಟ್‌ಬೋರ್ಡಿನಲ್ಲಿ ನೇತಾಡಿಕೊಂಡು ಹೋಗುವಂತೆ ಮಾಡುತ್ತಿದ್ದಾರೆ. ರವಿವಾರ ಬಸ್‌ಗಳನ್ನು ಓಡಿಸದೆ ಇರುವುದರಿಂದ ಜನರಿಗೆ ತೊಂದರೆ ಆಗುತ್ತಿದೆಂದು ದೂರಿದರು.

ಬದಲಾದ ನಿಯಮಾವಳಿಯ ಪ್ರಕಾರ ಯಾವುದೇ ಬಸ್‌ಗಳಿಗೆ 24 ಕಿ.ಮೀ. ಹೆಚ್ಚುವರಿ ಸಂಚರಿಸಲು ಅವಕಾಶವಿದೆ. ಅದರಂತೆ ಬೇಡಿಕೆ ಇರುವ ರೂಟ್‌ಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸಿದರೆ ಅಭ್ಯಂತರವಿಲ್ಲ ಎಂದು ಖಾಸಗಿ ಬಸ್ ಮಾಲಕರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಖಾಸಗಿ ಬಸ್‌ಗಳ ಸಾರ್ವಜನಿಕರಿಗೆ ಸೇವೆ ನೀಡುವ ನಿಟ್ಟಿನಲ್ಲಿ ಕಾರ್ಯಾಚರಿಸಬೇಕು. ಲಭ್ಯ ಇರುವ ಪರ್ಮಿಟ್ ಪ್ರಕಾರ ಬಸ್‌ಗಳು ಓಡಾಟ ಮಾಡುತ್ತಿವೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು. ಇಲ್ಲದಿದ್ದರೆ ಆ ಮಾರ್ಗಗಳಲ್ಲಿ ಜನರ ಹಿತದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸಬೇಕು. ಯಾವ ಮಾರ್ಗ ಗಳಿಗೆ ಬಸ್ ಅಗತ್ಯ ಇದೆ ಎಂಬುದರ ಕುರಿತು ಖಾಸಗಿ ಬಸ್ ಮಾಲಕರು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವಾರದೊಳಗೆ ನಿರ್ಧರಿಸಬೇಕು. ನ.10ರಂದು ಈ ಬಗ್ಗೆ ಮತ್ತೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಖಾಸಗಿ ಬಸ್‌ಗಳು ನಿಯಮಾವಳಿಗಳನ್ನು ಪಾಲನೆ ಮಾಡದಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾ ಗುವುದು. ಫುಟ್‌ಬೋರ್ಡ್‌ನಲ್ಲಿ ನೇತಾಡು ವುದು, ನಿರ್ದಿಷ್ಟ ಪ್ರಮಾಣಕ್ಕಿಂತ ಅಧಿಕ ಪ್ರಯಾಣಿಕರನ್ನು ಹಾಕುವ ಬಸ್‌ಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News