ಕಾರ್ಕಳ: ರೋಟರಿಯಿಂದ ‘ವೃತ್ತಿ ಸೇವಾ ಮಾಸಾಚಾರಣೆ'; ಸಾಧಕರಿಗೆ ಸನ್ಮಾನ
ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ವತಿಯಿಂದ ‘ವೃತ್ತಿ ಸೇವಾ ಮಾಸಾಚಾರಣೆ' ಅಂಗವಾಗಿ ಕಾರ್ಕಳದ ವಿವಿಧ ಕ್ಷೇತ್ರಗಳಲ್ಲಿನ ಬೇರೆ ಬೇರೆ ವೃತ್ತಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವ ಒಂಭತ್ತು ಮಂದಿಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಸೇನೆಯಿಂದ ನಿವೃತ್ತಗೊಂಡ ಸುಭೇದಾರ್ ಪ್ರವೀಣ್ ಶೆಟ್ಟಿ, ಸೈಕಲ್ ರಿಪೇರಿ ವೃತ್ತಿ ಮಾಡುತ್ತಿರುವ ಕೆ.ಸದಾನಂದ, ಗ್ಯಾಸ್ ವೆಲ್ಡರ್ ಸುರೇಂದ್ರ ಎಸ್., ಆಟೋ ರಿಕ್ಷಾ ಚಾಲಕ ದಾಮೋದರ, ಕ್ಷೌರಿಕ ವೃತ್ತಿ ಮಾಡುತ್ತಿರುವ ಸತೀಶ ಸುವರ್ಣ, ಬಡಗಿ ಪ್ರಸಾದ ಆಚಾರ್ಯ, ಆಸ್ಪತ್ರೆಯ ಸಿಬ್ಬಂದಿ ಪ್ರೇಮಾ, ಶುಶ್ರೂಷಕಿ ಲೂವಿಝಾ ತೌರೋ ಮತ್ತು ಶಂಕರದೇವಾಡಿಗರನ್ನು ಸನ್ಮಾನಿಸಲಾಯಿತು.
ಬಳಿಕ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಟರಿಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೈದ್ಯ ಕೇಶವ್ ರವರ ಮಿಮಿಕ್ರಿ ಆಕರ್ಷಣೆಯಾಗಿತ್ತು.
ಸಂಸ್ಥೆಯ ಸದಸ್ಯ ವಲಯ ಸೇನಾನಿ ರೋ. ಪ್ರಶಾಂತ್ ಬಿಳಿರಾಯ ಮತ್ತು ವಾಣಿ ದಂಪತಿಯ ಪುತ್ರ ಪ್ರಜ್ವಲ್ ಬಿಳಿರಾಯ, ಭಾವನಾ ನವದಂಪತಿ ಸಭೆಯ ಮುಂದೆ ಹಾರ ಬದಲಾಯಿಸಿಕೊಂಡರು.
ರೋಟರಿ ಸಂಸ್ಥೆಯವರ ಕಾರ್ಯವೈಖರಿಯನ್ನು ವೈಧ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ ಪ್ರಶಂಸಿದರು. ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ.ಭರತೇಶ್ ಆದಿರಾಜ್ ಮಾತನಾಡಿ, ರೋಟರಿಯಲ್ಲಿ ಜನವರಿ ತಿಂಗಳನ್ನು ವೃತ್ತಿ ಸೇವಾ ಮಾಸಾಚರಣೆಯನ್ನಾಗಿ ಆಚರಿಸುತ್ತಿದ್ದು, ಸ್ಥಳೀಯ ವಿವಿಧ ಕ್ಷೇತ್ರಗಳಲ್ಲಿನ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಿರುವುದು ಶ್ಲಾಘನೀಯ. ಸನ್ಮಾನಿತರು ಇತರರಿಗೆ ಮಾದರಿಯಾಗಿರಲಿ, ಅವರ ಜೀವನ ಫಲಪ್ರದವಾಗಲಿ ಎಂದು ಹಾರೈಸಿದರು.
ರೋಟರಿ ಅಧ್ಯಕ್ಷ ರೋ. ಸುರೇಂದ್ರ ನಾಯಕ್ ಸ್ವಾಗತಿಸಿದರು.ವೃತ್ತಿ ಸೇವಾ ಸಭಾಪತಿ, ನಿವೃತ್ತ ಪ್ರಾoಶುಪಾಲ ರೋ.ಗಣೇಶ್ ಬರ್ಲಾಯ ಮತ್ತು ಆನ್ಸ್ ಅಧ್ಯಕ್ಷೆ ಶರ್ಮಿಳಾ ರಮೇಶ್ ಶೆಟ್ಟಿ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ರೋ. ಸುಬ್ರಹ್ಮಣ್ಯ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆ ವೈದ್ಯರು, ಸಿಬ್ಬಂದಿಯವರು, ರೋಟರಿ ಸದಸ್ಯರು ಹಾಗೂ ಆಹ್ವಾನಿತರು ಉಪಸ್ಥಿತರಿದ್ದರು.