ನಿಟ್ಟೆ: ‘ಎಐ ಫಾರ್ ಸಸ್ಟೇನಬಿಲಿಟಿ’ ಕುರಿತ ಅಂ.ರಾಷ್ಟ್ರೀಯ ಸಮ್ಮೇಳನ
ನಿಟ್ಟೆ, ಜ.30: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾ ವಿದ್ಯಾಲಯ ದಲ್ಲಿ ‘ಸಸ್ಟೇನಬಿಲಿಟಿ ಮತ್ತು ಇಂಟೆಲಿಜೆಂಟ್ ಸಿಸ್ಟಮ್ಸ್‌ನಲ್ಲಿ ಎಐ (ಕೃತಕ ಬುದ್ಧಿಮತ್ತೆ)’ ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಕಾಲೇಜಿನ ವಿದ್ಯಾರ್ಥಿ ಸಂಶೋಧನಾ ವೇದಿಕೆ (ಎನ್‌ಎಫ್‌ಆರ್‌ಎಫ್) ವತಿಯಿಂದ ಯಶಸ್ವಿಯಾಗಿ ನಡೆಯಿತು. ವಿದ್ಯಾರ್ಥಿಗಳೇ ಮುನ್ನಡೆಸಿದ ಮೊದಲ ಪ್ರಯತ್ನ ಇದಾಗಿತ್ತು.
ಹೊಸದಿಲ್ಲಿಯ ತೈಪೆ ಎಕನಾಮಿಕ್ ಅಂಡ್ ಕಲ್ಚರಲ್ ಸೆಂಟರ್ (ಟಿಇಸಿಸಿ) ಇದರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಕೌನ್ಸಿಲರ್ ಹಾಗೂ ನಿರ್ದೇಶಕ ಡಾ. ಲಂಗ್-ಜೀ ಯಾಂಗ್ ಸಮ್ಮೇಳನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೆಮಿಕಂಡಕ್ಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ಆದ ಇತ್ತೀಚಿನ ಪ್ರಗತಿಗಳನ್ನು, ವಿಶೇಷವಾಗಿ ಸಿಎಂಓಎಸ್-ಎಂಇಎಂಎಸ್ ಏಕೀಕರಣವನ್ನು ವಿವರಿಸಿ, ಬಯೋಇನ್ಪಾಯರ್ಡ್ ಇಂಟಲಿಜೆಂಟ್ ಸಿಸ್ಟಮ್ಸ್‌ನ ಸ್ಥಿರ ಹಾಗೂ ಸಮರ್ಥ ಪರಿಹಾರಗಳನ್ನು ಒದಗಿಸುವಲ್ಲಿ ವಹಿಸುವ ಮಹತ್ವದ ಪಾತ್ರವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೇರಾಯ, ಎಐ ಎಂಬುದು ಸಸ್ಟೇನೆಬಲ್ ಅಭಿವೃದ್ಧಿ ಮತ್ತು ನವೀನತೆಯ ಪ್ರಮುಖ ಚಾಲಕಶಕ್ತಿಯೆಂದು ತಿಳಿಸಿದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕ ಡಾ.ಪ್ರವೀಣಕುಮಾರ್ ಶೆಟ್ಟಿ ತಮ್ಮ ಭಾಷಣದಲ್ಲಿ ನಿಟ್ಟೆ ವಿದ್ಯಾರ್ಥಿ ಸಂಶೋಧನಾ ವೇದಿಕೆಯನ್ನು ಕಾಲೇಜಿನಲ್ಲಿ ಸ್ಥಾಪಿಸುವುದರ ಹಿನ್ನೆಲೆ ಹಾಗೂ ಮಹತ್ವವನ್ನು ವಿವರಿಸಿದರು. ಎನ್‌ಎಂಎಎಂಐಟಿ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ಸಂಸ್ಥೆಯ ಶೈಕ್ಷಣಿಕ ಶ್ರೇಷ್ಠತೆ ಮತ್ತು ಜಾಗತಿಕ ಸಂಶೋಧನೆಯಲ್ಲಿ ಇರುವ ಬದ್ಧತೆಯನ್ನು ಪುನರುಚ್ಚರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ನಿಟ್ಟೆ ಡಿಮ್ಡ್ ವಿವಿಯ ಕುಲಪತಿ ಪ್ರೊ. (ಡಾ.) ಎಂ. ಎಸ್. ಮೂಡಿತ್ತಾಯ ಮಾತನಾಡಿ ಜಾಗತಿಕ ಸವಾಲುಗಳಿಗೆ ಕೃತಕ ಬುದ್ಧಿಮತ್ತೆಯ ಮೂಲಕ ಪರಿಹಾರ ಕಂಡುಕೊಳ್ಳಲು ವಿದ್ಯಾರ್ಥಿ ನೇತೃತ್ವದ ಸಂಶೋಧನೆ ಮತ್ತು ಅಂತರಶಾಸ್ತ್ರೀಯ ಸಹಕಾರ ಅತ್ಯವಶ್ಯಕವೆಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಎನ್‌ಎಂಎಎಂಐಟಿ ವಿದ್ಯಾರ್ಥಿ ಸಂಶೋಧನಾ ವೇದಿಕೆಯ ಅಧಿಕೃತ ಉದ್ಘಾಟನೆ ಹಾಗೂ ಸಮ್ಮೇಳನದ ಕಾರ್ಯಸೂಚಿಯ ಬಿಡುಗಡೆ ನಡೆಯಿತು. ಸಮ್ಮೇಳನದಲ್ಲಿ ಐದು ಪ್ರಮುಖ ವಿಭಾಗಗಳಲ್ಲಿ ತಾಂತ್ರಿಕ ಸಂಶೋಧನಾ ಪ್ರಬಂಧಗಳ ಪ್ರಸ್ತುತಿ ನಡೆದವು.
ವಿದ್ಯಾರ್ಥಿ ಅಧ್ಯಕ್ಷ ನಂದನ್ ಪೈ ಅತಿಥಿಗಳನ್ನು ಸ್ವಾಗತಿಸಿದರೆ, ಎಂಸಿಎ ವಿಭಾಗದ ಸಹಪ್ರಾಧ್ಯಾಪಕಿ ಡಾ. ಮಂಗಳಾ ಶೆಟ್ಟಿ ಸಮ್ಮೇಳನದ ಕುರಿತು ಪರಿಚಯ ನೀಡಿದರು. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎನ್. ಎಸ್. ಎಸ್. ರಾಮಕೃಷ್ಣ ಅತಿಥಿಗಳನ್ನು ಪರಿಚಯಿಸಿದರು. ಕಂಪ್ಯೂಟರ್ ಸಾಯನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ. ಶಶಾಂಕ್ ಶೆಟ್ಟಿ ವಂದಿಸಿದರು.