×
Ad

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ನೀಡಲು ಅನಗತ್ಯ ವಿಳಂಬ, ಕಿರಿಕಿರಿ ಆರೋಪ: ಸರಕಾರಿ ಯೋಜನೆಗಳ ಫಲಾನುಭವಿಗಳಿಂದ ದೂರು

Update: 2026-01-30 21:11 IST

ಉಡುಪಿ, ಜ.30: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿವಿಧ ಯೋಜನೆಗಳು ಹಾಗೂ ಬಡವರ ಕಲ್ಯಾಣ ಯೋಜನೆಗೆ ಸಂಬಂಧ ಪಟ್ಟಂತೆ ಸಾಲ ನೀಡಲು ಅಧಿಕಾರಿಗಳು ಅನಗತ್ಯ ವಿಳಂಬದ ಮೂಲಕ ಸತಾಯಿಸುವುದಲ್ಲದೇ, ಕಿರಿಕಿರಿಯನ್ನು ಉಂಟು ಮಾಡುತಿದ್ದಾರೆ ಎಂದು ಯೋಜನೆಗಳ ಫಲಾನುಭವಿಗಳು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆದ ಸಭೆಯಲ್ಲಿ ದೂರುಗಳ ಸರಮಾಲೆಯನ್ನೇ ಮುಂದಿಟ್ಟರು.

ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಸಾಬ್ರಕಟ್ಟೆ ಬ್ಯಾಂಕ್ ಆಫ್ ಬರೋಡಾ ಶಾಖೆಯ ಗ್ರಾಹಕರು ಮತ್ತು ಅಧಿಕಾರಿಗಳ ಜೊತೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಹಕರು ಹಾಗೂ ಫಲಾನುಭವಿಗಳಿಂದ ದೂರು ಕೇಳಿಬಂದವು.

ತನಗೆ ದೇವರಾಜ ಅರಸು ನಿಗಮದಿಂದ ಸಬ್ಸಿಡಿ ಹಣ ಬ್ಯಾಂಕಿಗೆ ಬಂದಿದ್ದರೂ ಸಕಾಲದಲ್ಲಿ ಸಾಲ ನೀಡಲಿಲ್ಲ ಎಂದು ಸ್ಥಳೀಯ ಗ್ರಾಹಕಿ ರೂಪಾ ಎಂಬವರು ಸಭೆಯಲ್ಲಿ ದೂರಿದರು. ಸರಕಾರದ ಯೋಜನೆಯನ್ನು ಅನುಷ್ಠಾನ ಗೊಳಿಸಲು ಯಾವುದೇ ರೀತಿಯಲ್ಲೂ ವಿಳಂಬ ಮಾಡಬಾರದು ಎಂದು ಸಂಸದ ಕೋಟ ಅಧಿಕಾರಿಗಳಿಗೆ ತಿಳಿಸಿದರು.

ಕನ್ನಡ ಬಾರದ ಅಧಿಕಾರಿಗಳಿಂದ ನಮಗೆ ವ್ಯವಹರಿಸಲು ಕಷ್ಟವಾಗುತ್ತಿದೆ. ಕನ್ನಡ ಬಾರದ ಅಧಿಕಾರಿಗಳು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ವಿನಾಃ ಕಾರಣ ಮಾಹಿತಿಗಳನ್ನೇ ನೀಡದೇ ಸತಾಯಿಸುತಿದ್ದಾರೆ. ಇದರಿಂದ ತಾನು ಅನಗತ್ಯವಾಗಿ ಬೆಂಗಳೂರಿಗೆ ಹೋಗಿ ಬರಬೇಕಾಯಿತು ಎಂದು ಬ್ಯಾಂಕಿನ ಗ್ರಾಹಕರಾದ ರಾಮ ಪೂಜಾರಿ ದೂರಿಕೊಂಡರು.

ನಮ್ಮ ಸ್ತ್ರೀಶಕ್ತಿ ಸಂಘಕ್ಕೆ ಸಾಲ ನೀಡಲು ವಿನಾಃ ಕಾರಣ ವಿಳಂಬ ಧೋರಣೆ ಅನುಸರಿಸುತಿದ್ದಾರೆ ಎಂದು ಗ್ರಾಹಕರು ತಿಳಿಸಿದಾಗ, ಈ ಬಗ್ಗೆ ಗಮನ ಹರಿಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.

ಒಂದು ವಾರದೊಳಗೆ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ. ಇನ್ನೆರಡು ದಿನದೊಳಗೆ ಬ್ಯಾಂಕಿನ ಹಿರಿಯ ಅಧಿಕಾರಿ ಗಳು ಸಂಬಂಧಪಟ್ಟ ಶಾಖೆಗೆ ಭೇಟಿ ನೀಡಿ ಇಂದು ಸ್ವೀಕರಿಸಿದ ಎಲ್ಲಾ ದೂರು, ಅಹವಾಲುಗಳನ್ನು ನ್ಯಾಯ ಯುತ ವಾಗಿ ಈಡೇರಿಸಬೇಕು ಎಂದು ಸಂಸದ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರಕಾರಗಳ ವಿವಿಧ ಯೋಜನೆಗಳಿಗೆ ಸಾಲ ಸೌಲಭ್ಯ, ನಿರಕ್ಷೇಪಣಾ ಪತ್ರ, ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಸಾಲ ಸೌಲಭ್ಯ, ಪಿ.ಎಂ.ಇ.ಜಿ.ಪಿ ಯೋಜನೆ, ಸ್ವ-ನಿಧಿ ಯೋಜನೆ, ಮುದ್ರಾ ಯೋಜನೆಗೆ ಸಂಬಂಧಿಸಿದಂತೆ ಜನಸಾಮಾನ್ಯ ರಿಗೆ ಸೂಕ್ತವಾಗಿ ಸ್ಪಂದಿಸಬೇಕು ಹಾಗೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಕಂಡುಬಂದಲ್ಲಿ ನ್ಯಾಯ ಯುತವಾಗಿ ಸ್ಪಂದಿಸಬೇಕು ಎಂದು ಸಂಸದ ಕೋಟ ಬ್ಯಾಂಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ರಾಷ್ಟ್ರೀಕೃತ ಬ್ಯಾಂಕುಗಳು ಬಡವರ ಕಲ್ಯಾಣ ಕಾರ್ಯಕ್ರಮದ ಅನುಷ್ಠಾನ ಮತ್ತು ಸರಕಾರದ ಜನಪರ ಯೋಜನೆ ಯನ್ನು ಅನುಷ್ಠಾನ ಮಾಡುವಲ್ಲಿ ಪ್ರಾಮಾಣಿಕವಾಗಿ ಸಹಕರಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಲ್ಲಿ ಮನವಿ ಮಾಡಿದರಲ್ಲದೇ, ಬಡಜನರ ವಾಸ್ತಾವಿಕ ಸ್ಥಿತಿಯನ್ನು ಅರಿತು ಅವರಿಗೆ ಬ್ಯಾಂಕಿನ ಸೌಲಭ್ಯವನ್ನು ಪ್ರಾಮಾಣಿಕವಾಗಿ ಮುಟ್ಟಿಸಬೇಕು ಎಂದರು.

ಸಭೆಯಲ್ಲಿ ಶಿರಿಯಾರ ಗ್ರಾಮಪಂಚಾಯತ್ ಅಧ್ಯಕ್ಷ ಸುದೀಂದ್ರ ಶೆಟ್ಟಿ, ಶಿರಿಯಾರ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ್ ಬಲ್ಲಾಳ್ ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಪ್ರಬಂಧಕರಾದ ಶಜೀಲಾ ಬೀವಿ ಜೆ, ಉಪಪ್ರಬಂಧಕ ವಿದ್ಯಾಧರ ಶೆಟ್ಟಿ, ಲೀಡ್ ಬ್ಯಾಂಕಿನ ಪ್ರಬಂಧಕರಾದ ಹರೀಶ್ ಮತ್ತು ಸಾಬ್ರಕಟ್ಟೆ ಬ್ಯಾಂಕ್ ಆಫ್ ಬರೋಡಾದ ಪ್ರಬಂಧಕ ಎಸ್.ಕೆ ಮನು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News