×
Ad

ಕಾರ್ಮಿಕರ ಉದ್ಯೋಗದ ಹಕ್ಕನ್ನು ಕಸಿದ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2026-01-30 18:18 IST

ಉಡುಪಿ, ಜ.30: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಮತ್ತು ಅದರಲ್ಲಿದ್ದ ಜನಪರ ಅಂಶಗಳನ್ನು ಬದಲಾಯಿಸಿ ವಿಬಿ ಜೀ ರಾಮ್ ಜೀ ಎಂಬ ಹೆಸರನ್ನು ಮರುನಾಮಕರಣ ಮಾಡುವ ಮೂಲಕ ಕಾರ್ಮಿಕರ ಉದ್ಯೋಗದ ಹಕ್ಕನ್ನು ಕಸಿದುಕೊಂಡ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಉಡುಪಿ ನಗರಸಭೆ ವ್ಯಾಪ್ತಿಯ 31ನೇ ಬೈಲೂರು ವಾರ್ಡಿನ ಮಿಷನ್ ಆಸ್ಪತ್ರೆಯ ವೃತ್ತದ ಬಳಿ ಶುಕ್ರವಾರ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮುಖ್ಯ ಭಾಷಣಕಾರರಾಗಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಮಾತನಾಡಿ, ಹಿಂದಿನ ಉದ್ಯೋಗ ಖಾತರಿ ಯೋಜನೆಯನ್ನು ಮರು ಜಾರಿಗೊಳಿಸಬೇಕು. ಪ್ರಸ್ತುತ ಜನವಿರೋಧಿ ನೀತಿ ವಿಬಿ ಜಿ ರಾಮ್ ಜೀಯನ್ನು ಕೈಬಿಡಬೇಕೆಂದು ಆಗ್ರಹಿಸಿದರು. ಕೇಂದ್ರ ಸರಕಾರದ ಮಲತಾಯಿ ಧೋರಣೆಯನ್ನು ಇವರು ಇದೇ ಸಂದರ್ಭದಲ್ಲಿ ಖಂಡಿಸಿದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರದ ಈ ರೀತಿಯ ಹುನ್ನಾರವನ್ನು ಜನಸಾಮಾನ್ಯರು ಸಹಿಸುವುದಿಲ್ಲ. ಕಾಂಗ್ರೆಸ್ ಪಕ್ಷವು ಬಡವರ ಪರ ಇರುವ ಪಕ್ಷ. ಜನ ಸಾಮಾನ್ಯರಿಗೆ ನೆಮ್ಮದಿಯ ಬದುಕನ್ನು ಕಲ್ಪಿಸುವುದಕ್ಕಾಗಿ ಇಂತಹ ಜನಪರ ಯೋಜನೆಯನ್ನು ಜಾರಿಗೆ ತಂದಿದೆ. ಕೇಂದ್ರ ಸರಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಬೂತ್ ಅಧ್ಯಕ್ಷರು, ಬಿ.ಎಲ್.ಎ-2, ವಾರ್ಡಿನ ಪ್ರಮುಖರಾದ ಮ್ಯಾಕ್ಸಿಮ್ ಡಿಸೋಜ, ಕೃಷ್ಣಾನಂದ ಪೈ, ಅನಂತಕೃಷ್ಣ ಪ್ರಭು, ಮಲ್ಲೇಶ್, ಲಿಖಿತ್, ಗೀತಾ ರವಿ, ಶಹನವಾಝ್, ವಿನಯ ಕರ್ಕಡಾ, ಶುಶಾಂತ್ ಸಾಲಿನ್ಸ್, ಶೋಭಾ ಭಂಡಾರಿ, ಶಾಂತಾ, ರಮೇಶ್ ರಘುರಾಮ್ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News