×
Ad

ಉಡುಪಿ ಜಿಲ್ಲಾ ಸರಕಾರಿ ವಕೀಲರಿಂದ ಕರ್ತವ್ಯಲೋಪ; ವಿಚಾರಣೆಯ ಬಳಿಕ ಸೂಕ್ತ ಕ್ರಮ: ಸರಕಾರದ ಹೇಳಿಕೆ

Update: 2026-01-30 21:37 IST

ಸಂತೋಷ್ ಹೆಬ್ಬಾರ್ 

ಉಡುಪಿ, ಜ.30: 2021-23ನೇ ಸಾಲಿನಲ್ಲಿ ಎ. ಸಂತೋಷ್ ಹೆಬ್ಬಾರ್ ಅವರು  ಉಡುಪಿಯ ಜಿಲ್ಲಾ ಸರಕಾರಿ ವಕೀಲರಾಗಿ ಕರ್ತವ್ಯ ನಿರ್ವಹಿಸುತಿದ್ದ ಅವಧಿಯಲ್ಲಿ ನ್ಯಾಯಾಲಯದ ತನಿಖೆಯಲ್ಲಿರುವ ವಿವಿಧ ಪ್ರಕರಮಗಳಲ್ಲಿ ಲಿಖಿತ ಹೇಳಿಕೆ ಸಲ್ಲಿಸದಿರುವುದ ರಿಂದ ಸರಕಾರಕ್ಕೆ ಹಿನ್ನಡೆಯಾಗಿ ಕರ್ತವ್ಯಲೋಪ ಎಸಗಿರುವ ಕುರಿತು ಸ್ವೀಕೃತ ವಾದ ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತಿದ್ದು, ವರದಿ ಸ್ವೀಕೃತವಾದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ವಿಧಾನ ಪರಿಷತ್‌ನಲ್ಲಿ ತಿಳಿಸಿದ್ದಾರೆ.

ಈ ಕುರಿತು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರು ಗುರುವಾರ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರ ನೀಡಿದ ಕಾನೂನು ಸಚಿವರು, ಈ ಬಗ್ಗೆ ಉಡುಪಿ ವಕೀಲರ ಸಂಘದ ಅಧ್ಯಕ್ಷರು ಸರಕಾರಕ್ಕೆ ದೂರು ಸಲ್ಲಿಸಿದ್ದಾರೆ ಎಂದರು.

ದೂರಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿಗಳು, ಜಿಲ್ಲಾ ಸರಕಾರಿ ವಕೀಲರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ವಿಚಾರಣೆ ನಡೆಯುತ್ತಿದೆ. ವಿಚಾರಣಾ ವರದಿ ಸ್ವೀಕೃತವಾದ ಬಳಿಕ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಉತ್ತರಿಸಿದರು.

ಎ.ಸಂತೋಷ್ ಹೆಬ್ಬಾರ್ ಅವರು 2021-23ರ ಅವಧಿಯಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಲ್ಲಿ ಜಿಲ್ಲಾ ಸರಕಾರಿ ವಕೀಲರಾಗಿ ಕರ್ತವ್ಯ ನಿರ್ವಹಿಸಿದ್ದು, ಈ ಅವಧಿಯಲ್ಲಿ ನ್ಯಾಯಾಲಯಗಳಲ್ಲಿ ತನಿಖಾ ಹಂತದಲ್ಲಿ ಇದ್ದ ಪ್ರಕರಣಗಳಲ್ಲಿ ಸರಕಾರದ ಪರವಾಗಿ ಲಿಖಿತ ಹೇಳಿಕೆ ಸಲ್ಲಿಸದೇ ಇರುವ ಕುರಿತು ಉಡುಪಿ ವಕೀಲರ ಸಂಘದ ಅಧ್ಯಕ್ಷರು ಸರಕಾರಕ್ಕೆ ದೂರು ಸಲ್ಲಿಸಿ ಗಮನ ಸೆಳೆದಿದ್ದರು ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಸಂತೋಷ್ ಹೆಬ್ಬಾರ್ ಅವರು ಎಷ್ಟು ಪ್ರಕರಣಗಳಲ್ಲಿ ಲಿಖಿತ ಹೇಳಿಕೆ ಸಲ್ಲಿಸಿಲ್ಲ ಎಂಬುದನ್ನು ಹಾಗೂ ಇದರಿಂದ ಸರಕಾರಕ್ಕೆ ಉಂಟಾಗಿರುವ ನಷ್ಟದ ಕುರಿತು ವಿಚಾರಣೆ ನಡೆಸಿ ವಿಚಾರಣಾ ವರದಿಯಲ್ಲಿ ಸಲ್ಲಿಸುವಂತೆ ಇದೇ ಜ.22ರಂದು ಉಡುಪಿ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೇ ವಕೀಲರ ಸಂಘದ ಅಧ್ಯಕ್ಷರು ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸುವಂತೆ ಜಿಲ್ಲಾ ಸರಕಾರಿ ವಕೀಲರು ಹಾಗೂ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಜ.22ರಂದೇ ಬರೆದ ಪತ್ರದಲ್ಲಿ ಕೋರಲಾಗಿದೆ. ದೂರಿಗೆ ಸಂಬಂಧಿಸಿದಂತೆ ವಿಚಾರಣಾ ವರದಿ, ಮಾಹಿತಿ ಸ್ವೀಕೃತವಾದ ಬಳಿಕ ವರದಿಯಲ್ಲಿನ ಅಂಶಗಳನ್ನು ಪರಿಶೀಲಿಸಿ, ಹಿಂದಿನ ಸರಕಾರಿ ವಕೀಲರಿಂದ ಕರ್ತವ್ಯಲೋಪದ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವರು, ಐವನ್ ಡಿಸೋಜರಿಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News