ಜಗತ್ತಿನ ಎಲ್ಲೆಡೆ ಗಾಂಧಿ ಜೀವಂತ: ಪ್ರೊ.ವರದೇಶ್ ಹಿರೇಗಂಗೆ
ಕುಂದಾಪುರ, ಜ.31: ಗಾಂಧಿ ಸಂದೇಶಗಳಾದ ಸ್ವಾತಂತ್ರ್ಯ, ಸಮಾನತೆ ಭ್ರಾತೃತ್ವ ಇಂದು ವಿಶ್ವದ ಹಲವು ದೇಶಗಳ ಸಂವಿಧಾನದಲ್ಲಿ ಅವಕಾಶ ಪಡೆದಿದ್ದು ಅಲ್ಲೆಲ್ಲ ಕಡೆ ಗಾಂಧಿ ಜೀವಂತವಾಗಿದ್ದಾರೆ. ಸತ್ಯ, ವಿವೇಕಕ್ಕೆ ಶಕ್ತಿ ಇದೆ. ಅದಕ್ಕೆ ಅಳಿವಿಲ್ಲ ಎಂದು ಮಣಿಪಾಲ ಗಾಂಧಿ ಕೇಂದ್ರದ ಸ್ಥಾಪಕ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ಅಭಿಪ್ರಾಯಪಟ್ಟಿದ್ದಾರೆ.
ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಗಾಂಧಿ ಹುತಾತ್ಮರಾದ ದಿನದ ಪ್ರಯುಕ್ತ ಶುಕ್ರವಾರ ಸಂಜೆ ನಡೆದ ’ಮಹಾತ್ಮ ಹುತಾತ್ಮ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಗಾಂಧಿ ಒಬ್ಬ ಸನಾತನವಾದಿ ಹಿಂದೂ ಆಗಿದ್ದರು. ಎಲ್ಲಾ ಮತಗಳನ್ನು ಗೌರವಿಸುವ ತಾತ್ವಿಕತೆ ಹೊಂದಿರುವ ಹಿಂದೂ ಆಗಿದ್ದರು. ನನ್ನ ಧರ್ಮವೇ ಶ್ರೇಷ್ಠ ಎನ್ನುವುದು ಇದಕ್ಕೆ ವಿರುದ್ಧವಾಗಿದೆ. ಅಮೆರಿಕದ ಟ್ರಂಪ್ ಮಾದರಿ ಅಭಿವೃದ್ಧಿ ಇಂದು ನಮ್ಮ ದೇಶದಲ್ಲಿ ಅನುಸರಿಸಲಾಗುತ್ತಿದೆ. ಪರಿಸರ ನಾಶ ಸಂಪನ್ಮೂಲ ಲೂಟಿ ಖಾಸಗಿಕರಣದ ಅಭಿವೃದ್ಧಿ ಕೆಲವರ ಅಭಿವೃದ್ಧಿಯಾಗಿದೆ ಎಂದು ಅವರು ಆರೋಪಿಸಿದರು.
1949ರಲ್ಲಿ ಗಾಂಧೀಜಿಯ ಹತ್ಯೆ ನಡೆದಿದ್ದು ಇಂದಿಗೂ ಕೂಡ ಅವರ ಸಿದ್ಧಾಂತದ ಹತ್ಯೆ ನಡೆಯುತ್ತಲೇ ಇದೆ. ಗಾಂಧೀಜಿಗೆ ಇತರ ಸಿದ್ಧಾಂತದ ಬಗ್ಗೆ ಭಿನ್ನಾಭಿಪ್ರಾಯ ಇದ್ದರು ಎಂದಿಗೂ ದ್ವೇಷ ಇರಲಿಲ್ಲ. ಗಾಂಧಿ ಹತ್ಯೆಗೆ ದ್ವೇಷ ಕಾರಣವಾದರೂ ಎಂದಿಗೂ ಪ್ರೀತಿ, ಶಾಂತಿ ಸಹಬಾಳ್ವೆ ಗೆಲ್ಲುತ್ತದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಹೆಸರು ಬದಲಿಸಿ ವಿಬಿಜಿ ರಾಮ್ ಜಿ ಯೋಜನೆ ಮೂಲಕ ಉದ್ಯೋಗ ನಿರಾಕರಣೆ ಯಾರೂ ಕೂಡ ಒಪ್ಪಲಾರದ್ದಾ ಗಿದೆ. ಇಂದಿನ ಭಾರತದ ಅಭಿವೃದ್ಧಿ ವಿನಾಶಕಾರಿ ಅಭಿವೃದ್ಧಿ ಯಾಗಿದೆ. ಈ ಅಭಿವೃದ್ಧಿ ಪ್ರಶ್ನಾರ್ಹವಾಗಿದೆ ಎಂದರು.
ಕುಂದಾಪುರದ ಪ್ರಗತಿಪರ ಚಿಂತಕ ಪ್ರೊ.ಹಯವದನ ಮೂಡುಸಗ್ರಿ ಮಾತನಾಡಿದರು. ಭಾರತ ಜ್ಞಾನ ವಿಜ್ಞಾನ ಸಮಿತಿ ಕುಂದಾಪುರ ಘಟಕದ ಆಶಾ ಕರ್ವಾಲೋ ತಂಡದವರು ಸೌಹಾರ್ದ ಗೀತೆಗಳನ್ನು ಪ್ರಸ್ತುತ ಪಡಿಸಿದರು.