ಉಡುಪಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ ನೇಮಕ
ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ
ಉಡುಪಿ, ಜ.31: ಪೋಪ್ ಲಿಯೋ XIV ಅವರು ವಂ| ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರನ್ನು ಉಡುಪಿ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಅವರು ಪ್ರಸ್ತುತ ಶಿರ್ವದ ಆರೋಗ್ಯ ಮಾತಾ ದೇವಾಲಯದ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ನೇಮಕಾತಿಯನ್ನು ಜ.31ರಂದು ರೋಮ್ನಲ್ಲಿ ಮಧ್ಯಾಹ್ನ 12 ಗಂಟೆಗೆ (ಭಾರತೀಯ ಸಮಯ ಸಂಜೆ 4.30ಕ್ಕೆ) ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಅದೇ ಸಮಯದಲ್ಲಿ ಉಡುಪಿ ಜಿಲ್ಲೆಯ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಪ್ರಕಟಿಸಲಾಯಿತು.
ವಂದನೀಯ ರೆವ. ಫಾ. (ಡಾ.) ಲೆಸ್ಲಿ ಕ್ಲಿಫರ್ಡ್ ಅವರು 1962ರ ಆಗಸ್ಟ್ 19ರಂದು ಕರ್ನಾಟಕದ ಉಡುಪಿ ಜಿಲ್ಲೆಯ ಉಚ್ಚಿಲ (ಎರ್ಮಾಳ್) ಗ್ರಾಮದಲ್ಲಿ ಲಾರೆನ್ಸ್ ಡಿಸೋಜಾ ಮತ್ತು ಸಿಸಿಲಿಯಾ ದಂಪತಿಗಳ ಪುತ್ರರಾಗಿ ಜನಿಸಿದರು. ದೈವಿಕ ಕ್ರೈಸ್ತ ಪರಂಪರೆಯ ಕುಟುಂಬದಲ್ಲಿ ಬೆಳೆದ ಅವರು, ಎಂಟು ಸಹೋದರ-ಸಹೋದರಿಯರ ದೊಡ್ಡ ಕುಟುಂಬಕ್ಕೆ ಸೇರಿದವರು. ಕುಟುಂಬದ ನಂಬಿಕೆ ಮತ್ತು ಮೌಲ್ಯಗಳು ಅವರ ಧಾರ್ಮಿಕ ಜೀವನಕ್ಕೆ ಮಹತ್ವದ ಪ್ರೇರಣೆಯಾಗಿವೆ. ಅವರ ಹಿರಿಯ ಸಹೋದರಿಯರಾದ ವೆರೋನಿಕಾ ಡಿಸೋಜಾ ಹಾಗೂ ಕ್ರಿಸ್ಟಿನ್ ಡಿಸೋಜಾ ನಿಧನರಾಗಿದ್ದು ಉಳಿದ ಸಹೋದರ-ಸಹೋದರಿಯರು ಪ್ರಾರ್ಥನೆಗಳ ಮೂಲಕ ಅವರನ್ನು ಸದಾ ಬೆಂಬಲಿಸುತ್ತಿದ್ದಾರೆ.
ಅವರ ಪ್ರಾಥಮಿಕ ಶಿಕ್ಷಣ ಉಚ್ಚಿಲದ ಸರಸ್ವತಿ ಮಂದಿರ ಹೈರ್ಯ ಪ್ರೈಮರಿ ಶಾಲೆಯಲ್ಲಿ (1969-1976) ಆರಂಭಗೊಂಡಿತು. ಬಳಿಕ ಎರ್ಮಾಳಿನ ಸರ್ಕಾರಿ ಮೀನುಗಾರಿಕಾ ಪ್ರೌಢಶಾಲೆಯಲ್ಲಿ (1976-1979) ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ಅದಮಾರಿನ ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ (1979-1981) ಪೂರ್ವ ವಿಶ್ವವಿದ್ಯಾಲಯ ಶಿಕ್ಷಣ ಪಡೆದರು.
ದೇವರ ಕರೆಗೆ ಸ್ಪಂದಿಸಿದ ಫಾ. ಲೆಸ್ಲಿ ಅವರು ಯಾಜಕ ತರಬೇತಿಯೊಂದಿಗೆ ಉನ್ನತ ಶಿಕ್ಷಣ ಮುಂದುವರಿಸಿದರು. ಮಂಗಳೂರು ಸಂತ ಜೋಸೆಫ್ ಅಂತರ-ಧರ್ಮಪ್ರಾಂತ್ಯ ಸೆಮಿನರಿಯಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡುವಾಗ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ (1982-1985) ಪಡೆದರು. ನಂತರ ರೋಮ್ನ ಪಾಂಟಿಫಿಕಲ್ ಉರ್ಬಾನಿಯಾನಾ ವಿಶ್ವವಿದ್ಯಾಲಯದಿಂದ ಧರ್ಮಶಾಸ್ತ್ರದಲ್ಲಿ ಬ್ಯಾಚುರ್ಲ ಪದವಿ (1986-1990) ಪಡೆದರು.
ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. (1991-1993), ಬೆಂಗಳೂರು ಮನೋವಿಜ್ಞಾನ ಮತ್ತು ತರಬೇತಿ ಸಂಸ್ಥೆಯಿಂದ ಡೆಪ್ತ್ ಸೈಕಾಲಜಿ ಮತ್ತು ಫಾರ್ಮೇಷನ್ ಡಿಪ್ಲೊಮಾ (1993-1995) ಪಡೆದಿದ್ದಾರೆ. ಬಳಿಕ ಬೆಲ್ಜಿಯಂನ ಲುವೇನ್ನ ಕ್ಯಾಥೊಲಿಕ್ ವಿಶ್ವವಿದ್ಯಾಲಯದಿಂದ ಧರ್ಮಶಾಸ್ತ್ರದಲ್ಲಿ ಲಿಸೆನ್ಸಿಯೇಟ್ (1997-1999) ಹಾಗೂ ನೈತಿಕ ಧರ್ಮಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ (1999-2003) ಪಡೆದಿದ್ದಾರೆ.
ಫಾ. ಲೆಸ್ಲಿ ಅವರು 1990ರ ಮೇ 10ರಂದು ಮಂಗಳೂರು ಧರ್ಮಪ್ರಾಂತ್ಯಕ್ಕೆ ಯಾಜಕರಾಗಿ ಅಭಿಷೇಕಗೊಂಡರು. ಅವರ ಯಾಜಕ ಸೇವೆ ಕುಂದಾಪುರದ ಹೋಲಿ ರೋಸರಿ ದೇವಾಲಯದಲ್ಲಿ ಸಹಾಯಕ ಧರ್ಮಗುರುವಾಗಿ (1990-1992) ಹಾಗೂ ಮಂಗಳೂರಿನ ಕುಲಶೇಖರದ ಹೋಲಿ ಕ್ರಾಸ್ ದೇವಾಲಯದಲ್ಲಿ (1992-1995) ಆರಂಭ ವಾಯಿತು. ಅವರು ಮಂಗಳೂರಿನ ಸಂತ ಜೋಸೆಫ್ ಅಂತರ-ಧರ್ಮಪ್ರಾಂತ್ಯ ಸೆಮಿನರಿಯಲ್ಲಿ ನೈತಿಕ ಧರ್ಮ ಶಾಸ್ತ್ರದ ಪ್ರಾಧ್ಯಾಪಕರಾಗಿಯೂ ಮತ್ತು ತರಬೇತಿದಾರರಾಗಿಯೂ (1995-1997) ಸೇವೆ ಸಲ್ಲಿಸಿದ್ದು, 2013ರವರೆಗೆ ಅತಿಥಿ ಪ್ರಾಧ್ಯಾಪಕರಾಗಿ ಮುಂದುವರಿಸಿದರು.
ಪಾಂಗ್ಲಾ/ಶಂಕರಪುರದ ಸಂತ ಜಾನ್ ದಿ ಎವಾಂಜೆಲಿಸ್ಟ್ ದೇವಾಲಯದ ಧರ್ಮಗುರುಗಳಾಗಿ (2010-2017) ಹಾಗೂ ನಂತರ ಕಲ್ಯಾಣಪುರ-ಸಂತೆಕಟ್ಟೆಯ ಮೌಂಟ್ ರೋಸರಿ ದೇವಾಲಯದ ಧರ್ಮಗುರುಗಳಾಗಿ (2017-2022) ಸೇವೆ ಸಲ್ಲಿಸುವ ಮೂಲಕ ಅವರು ತಮ್ಮ ಧಾರ್ಮಿಕ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ಈ ಅವಧಿಯಲ್ಲಿ ಅವರು ಶಿಕ್ಷಣ ಸಂಸ್ಥೆಗಳ ಸಂಯೋಜಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಜೂನ್ 2022ರಿಂದ ಫಾ. ಲೆಸ್ಲಿ ಅವರು ಶಿರ್ವದ ಶೋಕಮಾತಾ ದೇವಾಲಯದ ಧರ್ಮಗುರುಗಳಾಗಿಯೂ, ಡಾನ್ ಬಾಸ್ಕೋ ಹಾಗೂ ಸೈಂಟ್ ಮೇರೀಸ್ ಶಿಕ್ಷಣ ಸಂಸ್ಥೆಗಳ ಸಂಯೋಜಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ, ಉಡುಪಿ ಧರ್ಮಪ್ರಾಂತ್ಯದ ಆಡಳಿತ ಮತ್ತು ನಿರ್ವಹಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಅವರು 2022 ರಿಂದ 2025ರವರೆಗೆ ಯಾಜಕರ ಮಂಡಳಿಯ ಕಾರ್ಯದರ್ಶಿಯಾಗಿದ್ದು, ಪ್ರಸ್ತುತ ಶಿರ್ವ ವಲಯದ ಪ್ರಧಾನ ಧರ್ಮ ಗುರುಗಳಾಗಿ, ಉಡುಪಿ ಧರ್ಮಪ್ರಾಂತ್ಯದ ಧಾರ್ಮಿಕ ನ್ಯಾಯಮಂಡಳಿಯ ವಕೀಲ ಹಾಗೂ ಸಲಹೆಗಾರರ ಮಂಡಳಿಯ ಸದಸ್ಯರಾಗಿಯೂ (2023ರಿಂದ ಇಂದಿನವರೆಗೆ) ಸೇವೆ ಸಲ್ಲಿಸುತ್ತಿದ್ದಾರೆ.