ಬಜೆಟ್| ಕರಾವಳಿ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ: ಪ್ರಸಾದ್‌ರಾಜ್ ಕಾಂಚನ್
ಉಡುಪಿ: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ರಾಜ್ಯ ಹಾಗೂ ಕರಾವಳಿ ಜಿಲ್ಲೆಗಳ ಪಾಲಿಗೆ ನಿರಾಶದಾಯಕ ಬಜೆಟ್ ಆಗಿದ್ದು ಕರಾವಳಿ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ ಇದ್ದಂತೆ. ಇದೊಂದು ನಿರಾಶದಾ ಯಕ ಮತ್ತು ಶ್ರೀಮಂತರ ಬಜೆಟ್ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಟೀಕಿಸಿದ್ದಾರೆ.
ಮುಂದೆ ಬರಲಿರುವ ಚುನಾವಣೆ ದೃಷ್ಟಿ ಇಟ್ಟುಕೊಂಡು ಹಲವು ರಾಜ್ಯಗಳಿಗೆ ಭರ್ಜರಿ ಕೊಡುಗೆ ನೀಡಿದೆ ಹೊರತು ಕರಾವಳಿ ಭಾಗಕ್ಕೆ ಯಾವುದೇ ಅಭಿವೃದ್ದಿ ಯೋಜನೆಗಳನ್ನು ನೀಡಿಲ್ಲ. ಕರಾವಳಿ ಭಾಗದಲ್ಲಿ ರೈಲ್ವೇ ಯೋಜನೆಗಳಿಗೆ ವಿಶೇಷ ಒತ್ತು ನೀಡಬೇಕಾಗಿತ್ತು. ಹೆಚ್ಚುವರಿ ರೈಲುಗಳು ಹಾಗೂ ದ್ವಿಪಥ ಯೋಜನೆಗಳನ್ನು ವಿಸ್ತರಿಸಬೇಕಾಗಿತ್ತು. ಈ ವಿಚಾರದಲ್ಲಿ ಕರಾವಳಿಗೆ ವಿತ್ತ ಸಚಿವೆ ಯಾವುದೇ ಯೋಜನೆಯನ್ನು ನೀಡಿರುವುದು ನಿಜಕ್ಕೂ ನೋವುಂಟು ಮಾಡಿದೆ.
ಮೀನುಗಾರಿಕೆ ಚಟುವಟಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡ ಲಾಗಿದ್ದು ಕರಾವಳಿಯ ಬಂದರುಗಳನ್ನು ಅಭಿವೃದ್ದಿ ಪಡಿಸಲು ಒತ್ತು ನೀಡದಿರುವುದು ಕಂಡು ಬಂದಿದೆ. ಬಹುಶಃ ಕರಾವಳಿ ಭಾಗದ ಸಂಸದರು ಗಳು ಕರಾವಳಿ ಭಾಗಕ್ಕೆ ಅಗತ್ಯ ಇರುವ ಬೇಡಿಕೆಗಳನ್ನು ಕೇಂದ್ರದ ಗಮನಕ್ಕೆ ತರುವಲ್ಲಿ ವಿಫಲವಾಗಿರುವ ಕಾರಣದಿಂದ ಕರಾವಳಿಗೆ ಅನ್ಯಾಯವಾಗಿರ ಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.