×
Ad

ಬಜೆಟ್‌ನಲ್ಲಿ ಎಐಗೆ ಆದ್ಯತೆ, ನಿರುದ್ಯೋಗ ಸಮಸ್ಯೆ ಹೆಚ್ಚಳ ಆತಂಕ: ಪ್ರೊ.ಸುರೇಂದ್ರನಾಥ ಶೆಟ್ಟಿ

Update: 2026-02-01 19:40 IST

ಉಡುಪಿ, ಫೆ.1: ಕಳೆದ ಆರ್ಥಿಕ ವರ್ಷದಲ್ಲಿ ಮಂಡಿಸಿದ ಬಜೆಟ್ ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿದೆ ಎಂಬುದು ಈ ಬಾರಿಯ ಬಜೆಟ್‌ನಲ್ಲಿ ಎಲ್ಲಿಯೂ ಉಲ್ಲೇಖಿಸದೇ ಇರುವುದು ವಿಷಾದನೀಯ. ಜನಸಾಮಾನ್ಯರಿಗೆ ಯಾವುದೇ ಬಜೆಟ್ ಮೇಲೆ ವಿಶ್ವಾಸಾರ್ಹತೆ ಮೂಡಿಬರಬೇಕಾದರೆ ಹಿಂದಿನ ಬಜೆಟ್ ಮೇಲಿನ ಪ್ರಗತಿಯ ಕುರಿತಾಗಿ ಸದನಕ್ಕೆ ಮಾಹಿತಿ ನೀಡುವ ಕಾರ್ಯ ನಡೆಯಲೇಬೇಕು ಎಂದು ಉಡುಪಿಯ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

ಕೃತಕ ಬುದ್ಧಿ ಮತ್ತೆಗೆ ಎಲ್ಲಾ ವಲಯದಲ್ಲಿ ವಿಶೇಷ ಮಹತ್ವ ಕೊಟ್ಟಿರುವುದು ಉತ್ತಮ ನಿರ್ಧಾರ ಆದರೆ ಮಾನವ ಸಂಪತ್ತು ಬಳಕೆಗೆ ಕಡಿವಾಣ ಬೀಳುತ್ತದೆ ಅನ್ನುವ ಅಭಿಪ್ರಾಯ ನಡುವೆ ನಿರುದ್ಯೋಗ ಸಮಸ್ಯೆ ಇನ್ನಷ್ಟು ಹೆಚ್ಚಾಗಿ ಕಾಡಬಹುದು ಅನ್ನಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ನಗರ ಪ್ರದೇಶಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಿರುವುದು ಸ್ವಾಗತಾರ್ಹ. ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಬೆಂಗಳೂರಿಗೂ ವಿಸ್ತರಣೆ ಮಾಡಿರುವುದು ಶ್ಲಾಘನೀಯ. ಟ್ಯೂರಿಸಂ ಬೆಳವಣಿಗೆಗೆ ಪೂರಕವಾಗಿ ಮೆಡಿಕಲ್ ಟ್ಯುರಿಸಂ ಹೆಸರಿನಲ್ಲಿ ಐದು ಪ್ರದೇಶದಲ್ಲಿ ಮೆಡಿಕಲ್ ಹಬ್ ಸ್ಥಾಪನೆಗೆ ಮುಂದಾಗಿರುವುದು ಉದ್ಯೋಗ ಸೃಷ್ಟಿಕೆ ಸಹಾಯಕವಾಗ ಬಹುದು ಎಂಬುದು ಸರಕಾರದ ನಿರೀಕ್ಷೆಯಾಗಿದೆಂದು ಅವರು ತಿಳಿಸಿದ್ದಾರೆ.

ಪಶುವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಹೆಚ್ಚಿನ ಅನುದಾನದ ಭರವಸೆ ಆಶಾದಾಯಕ. ಸಣ್ಣ ಕೈಗಾರಿಕೆ ಮತ್ತು ಖಾದಿ ಗುಡಿಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಉತ್ತೇಜನ ಕ್ರಮ ಸ್ವಾಗತಾರ್ಹ. ಕರಾವಳಿಯ ಪ್ರದೇಶದ ಮೀನು ಗಾರರ ಸಹಕಾರಿ ಸಂಸ್ಥೆ ಸ್ಥಾಪನೆ ಬಗ್ಗೆ ಬಜೆಟ್‌ನಲ್ಲಿ ಒತ್ತು ನೀಡಿರುವುದು ಬಜೆಟ್‌ನಲ್ಲಿ ಕಾಣುವ ಉತ್ತಮ ಅಂಶ. ಜಿಎಸ್‌ಟಿ ಸರಳೀಕೃತ ನಿರ್ಧಾರ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸಮಾಧಾನಕರ ತರುತ್ತದೆ.

ಕ್ಯಾನ್ಸರ್‌ನಂತಹ ಪ್ರಮುಖ ಖಾಯಿಲೆಗಳ ಔಷಧಿಗಳಿಗೆ ತೆರಿಗೆ ವಿನಾಯಿತಿ ತೋರಿರುವುದು ಬಜೆಟ್‌ನಲ್ಲಿ ಕಾಣುವ ಇನ್ನೊಂದು ಪ್ರಮುಖ ಅಂಶ. 2047 ತನಕ ಭಾರತದಲ್ಲಿ ವಿದೇಶಿ ಕಂಪನಿಗಳ ಬಂಡವಾಳ ಹೂಡಿಕೆಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡ ಬಹುದು. ಒಟ್ಟಿನಲ್ಲಿ ವಿತ್ತ ಸಚಿವರು ಮಂಡಿಸಿದ ಬಜೆಟ್ ಅಭಿವೃದ್ಧಿ ಜನಪರ ಯೋಗ ಕ್ಷೇಮದ ದೃಷ್ಟಿಯಿಂದ ಹೊಸದೊಂದು ಕನಸು ಮೂಡಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News