ಕಾರ್ಮಿಕ ಸಂಹಿತೆಗಳಿಂದ ಮಹಿಳಾ ಕಾರ್ಮಿಕ ವರ್ಗ ದುರ್ಬಲ: ಎಂ.ಕಾಮೇಶ್ವರಿ
21ನೇ ಉಡುಪಿ ವಿಭಾಗೀಯ ಮಹಿಳಾ ಸಮಾವೇಶ ಉದ್ಘಾಟನೆ
ಉಡುಪಿ, ಫೆ.1: ಕೇಂದ್ರ ಸರಕಾರದ ಪ್ರಸಕ್ತ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳ ಅನುಸಾರ ಕಾರ್ಮಿಕರ ಸಂವಿಧಾನಬದ್ಧ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ. ಈ ನಿಟ್ಟಿನಲ್ಲಿ ಮಹಿಳಾ ಕಾರ್ಮಿಕರನ್ನು ಇನ್ನಷ್ಟು ದುರ್ಬಲ ರನ್ನಾಗಿಸುವಂತೆ ಕಾರ್ಮಿಕ ಸಂಹಿತೆಗಳಲ್ಲಿ ಮಾರ್ಪಾಡು ಮಾಡಲಾಗಿದೆ. ಸರಕಾರದ ಈ ರೀತಿಯ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಮಹಿಳಾ ಕಾರ್ಮಿಕರು ಒಗ್ಗಟ್ಟಾಗಿ ಹೋರಾಟ ನಡೆಸಿ ಸರಕಾರದ ನೀತಿಗಳನ್ನು ಸೋಲಿಸಬೇಕು ಎಂದು ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಉಪಾಧ್ಯಕ್ಷೆ ಎಂ. ಕಾಮೇಶ್ವರಿ ಹೇಳಿದ್ದಾರೆ.
ವಿಮಾ ನೌಕರರ ಸಂಘ ಉಡುಪಿ ವಿಭಾಗದ ವತಿಯಿಂದ ಉಡುಪಿಯ ಲಿಕೋ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ 21ನೇ ವಿಭಾಗೀಯ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಭಾರತದ ಇತ್ತೀಚಿಗಿನ ಆರ್ಥಿಕ ಸರ್ವೆಕ್ಷಣೆಯ ಪ್ರಕಾರ ಶೇ.40ರಷ್ಟು ಮಹಿಳೆಯರು ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದು ಶೇ.7ರಷ್ಟು ಮಹಿಳೆಯರು ನೈರ್ಮಲ್ಯ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಮತ್ತು ಎಲ್ಲಾ ಅಸಂಘಟಿತ ವಲಯಗಳಲ್ಲಿ ವೇತನ ತಾರತಮ್ಯ ಮತ್ತು ಮಾಲೀಕ ವರ್ಗದಿಂದ ಕಿರುಕುಳ ಅನುಭಸುತ್ತಿದ್ದಾರೆ ಎಂದು ಅವರು ದೂರಿದರು.
ಕಾರ್ಮಿಕ ಸಂಘಟನೆಗಳು ದೇಶಕ್ಕೆ ಕಂಟಕಪ್ರಾಯವಾಗಿವೆ ಮತ್ತು ಅವು ಕೇವಲ ಝಂಡಾ ಸಂಘಟನೆಗಳು ಎಂದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಇತ್ತೀಚಿಗಿನ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ನ್ಯಾಯ ಮೂರ್ತಿಗಳು ಈ ರೀತಿಯ ಹೇಳಿಕೆಗಳನ್ನು ನೀಡುವ ಮೊದಲು ದೇಶದ ಕಾರ್ಮಿಕ ಸಂಘಟನೆಗಳ ಸುದೀರ್ಘ ಇತಿಹಾಸವನ್ನು ತಿಳಿದು ಕೊಳ್ಳುವುದು ಒಳಿತು ಎಂದು ಅವರು ಸಲಹೆ ನೀಡಿದರು.
ಮಹಿಳಾ ಕಾರ್ಮಿಕರ ಉದ್ಯೋಗ ಸ್ಥಳದ ಹಾಗೂ ಹೊರ ಪ್ರಪಂಚದ ಸ್ಥಾನಮಾನ ಮತ್ತು ಸಾಮಾನ್ಯ ಮಹಿಳಾ ಕಾರ್ಮಿಕರ ಒಟ್ಟಾರೆ ಸ್ಥಿತಿಗತಿಗಳ ಬಗ್ಗೆ ತುಲನಾತ್ಮಕವಾಗಿ ವಿಶ್ಲೇಷಿಸಿದ ಅವರು, ಮಹಿಳಾ ಸಮಾನತೆಗೆ ಮತ್ತು ಸಬಲೀಕರಣಕ್ಕೆ ಎದುರಾಗಿರುವ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು ಎಂದು ಕರೆ ನೀಡಿದರು.
ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವನಾಥ, ಸಂಘದ ನೇತೃತ್ವದಲ್ಲಿ ಮಹಿಳಾ ಚಳುವಳಿಗಳು ನಡೆದು ಬಂದ ದಾರಿ ಮತ್ತು ಹೊಸ ಕಾರ್ಮಿಕ ಸಂಹಿತೆಗಳಿಂದಾಗಿ ಕಾರ್ಮಿಕರ ಮೇಲೆ ಆಗುವ ದುಷ್ಪರಿಣಾಮ ಗಳ ಬಗ್ಗೆ ಮಾತನಾಡಿದರು ಹಾಗೂ ಮುಂಬರುವ ಫೆ.12ರ ರಾಷ್ಟ್ರವ್ಯಾಪಿ ಮುಷ್ಕರವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.
ಸಂಘದ ಮಹಿಳಾ ಉಪಸಮಿತಿಯ ಸಂಚಾಲಕಿ ನಿರ್ಮಲ ಮಾತನಾಡಿ, ಮಹಿಳೆಯರು ತಮ್ಮ ದೈನಂದಿನ ಜೀವನ ದಲ್ಲಿ ಬಹಳಷ್ಟು ಕಟ್ಟುಪಾಡುಗಳನ್ನು ಹೊಂದಿದ್ದಾರೆ. ಹಾಗೆಯೇ ಇತ್ತೀಚಿಗಿನ ದಿನಗಳಲ್ಲಿ ಮಳೆಯರ ಮೇಲಿನ ದೌರ್ಜನ್ಯ ಗಳು ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿಲ್ಪಾ ಜೆ.ರೆಬೆಲ್ಲೋ ಮಹಿಳಾ ಉಪ ಸಮಿತಿಗೆ ಸಂಚಾಲಕಿಯಾಗಿ ಹಾಗೂ ಸೀತಾಲಕ್ಷ್ಮಿ ಆರ್. ಉಪಸಂಚಾಲಕಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ವೇದಿಕೆಯಲ್ಲಿ ಸಂಘದ ಕೋಶಾಧಿಕಾರಿ ಕವಿತಾ ಎಸ್. ಉಪಸ್ಥಿತರಿದ್ದರು. ಶಿಲ್ಪಾ ಜೆ.ರೆಬೆಲ್ಲೋ ಸ್ವಾಗತಿಸಿ, ವಂದಿಸಿದರು.
‘ಇಂದು ಸಾಪ್ಟ್‌ವೇರ್ ಉದ್ದಿಮೆಗಳಲ್ಲಿ ದುಡಿಯುವ ಮಹಿಳೆಯು ಗರ್ಭಿಣಿಯಾದಲ್ಲಿ ಉದ್ಯೋಗ ಕಳೆದುಕೊಳ್ಳುತ್ತಿರುವ ಪರಿಸ್ಥಿತಿ ಎದುರಾಗಿದೆ. ಉದ್ಯೋಗ ಸ್ಥಳಗಳಲ್ಲಿ ಮಹಿಳೆಯ ಮೇಲೆ ನಿರಂತರ ಶೋಷಣೆಗಳು ನಡೆಯುತ್ತಿವೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳ ಮರ್ಯಾದಾ ಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಿರುವುದು ದುರಂತ’
-ಎಂ.ಕಾಮೇಶ್ವರಿ, ಉಪಾಧ್ಯಕ್ಷೆ, ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟ