ಬ್ರಹ್ಮಾವರ ಎಚ್‌ಎಂಸಿ ಯುನೈಟೆಡ್ ಕ್ರಿಕೆಟ್ ಟ್ರೋಫಿ | ಅದೃಷ್ಟದ ಆಯ್ಕೆಯಲ್ಲಿ ಪಂಚಜನ್ಯ ವಿನ್ನರ್, ಜಯಕರ್ನಾಟಕ ರನ್ನರ್
ಉಡುಪಿ : ವಿವಾದಕ್ಕೆ ಕಾರಣವಾಗಿ ಅರ್ಧದಲ್ಲಿಯೇ ರದ್ದಾಗಿದ್ದ ಎಚ್‌ಎಂಸಿ ಯುನೈಟೆಡ್ ಕ್ರಿಕೆಟ್ ಟ್ರೋಫಿಯ ವಿಜೇತ ತಂಡಗಳನ್ನು ಸೋಮವಾರ ಅದೃಷ್ಟ ನಾಣ್ಯ ಚಿಮ್ಮುಗೆ ಮೂಲಕ ಆಯ್ಕೆ ಮಾಡಲಾಯಿತು. ಈ ಮೂಲಕ ಖುಷಿ ಅಮರ್ ಪಾಂಚಜನ್ಯ ತಂಡವು ವಿನ್ನರ್ ಆಗಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರನ್ನರ್ಸ್ ಪ್ರಶಸ್ತಿಯನ್ನು ಬೆಂಗಳೂರಿನ ಜಯ ಕರ್ನಾಟಕ ತಂಡ ಪಡೆದುಕೊಂಡಿತು.
ಉಡುಪಿಯ ಮಣಿಪಾಲ ಇನ್ ಹೊಟೇಲ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ವಿಜೇತ ತಂಡಗಳು ಸೇರಿದಂತೆ ಸೆಮಿಫೈನಲ್ ಪ್ರವೇಶಿಸಿದ ಇಝಾನ್ ಚೈತನ್ಯ ಫೈರ್ಸ್ ಎಚ್.ಎಂ ಎಕ್ತಾ ಹಾಗೂ ಫ್ರೆಂಡ್ಸ್ ಬೆಂಗಳೂರು ತಂಡಗಳಿಗೆ ತಲಾ 5 ಲಕ್ಷ ರೂ.ನಂತೆ ಒಟ್ಟು 20ಲಕ್ಷ ರೂ. ಮೊತ್ತವನ್ನು ಹಂಚಲಾಯಿತು.
ಎಚ್‌ಎಂಸಿ ಯುನೈಟೆಡ್ ವತಿಯಿಂದ ಬ್ರಹ್ಮಾವರದಲ್ಲಿ ಜ.23ರಿಂದ ಮೂರು ದಿನಗಳ ಕಾಲ ಎಚ್‌ಎಂಸಿ ಯುನೈಟೆಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಈ ಟೂರ್ನಿಯಲ್ಲಿ ಆಯ್ದ 16 ತಂಡಗಳು ಭಾಗವಹಿಸಿದ್ದು, ಬೆಂಗಳೂರು, ಮಧ್ಯಪ್ರದೇಶ, ತಮಿಳುನಾಡು, ಶ್ರೀಲಂಕಾ, ಗಲ್ಫ್ ದೇಶಗಳ ಆಟಗಾರರು ವಿವಿಧ ತಂಡ ಗಳಲ್ಲಿ ಪಾಲ್ಗೊಂಡಿದ್ದರು. ಚಾಂಪಿಯನ್ ತಂಡಕ್ಕೆ 25 ಲಕ್ಷ ರೂ. ಹಾಗೂ ರನ್ನರ್ಸ್ ಅಪ್ ತಂಡಕ್ಕೆ 15 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ಕೊನೆಯ ದಿನವಾದ ಜ.25ರಂದು ನಡೆದ ಜಾನ್ಸನ್ ಕುಂದಾಪುರ ಮತ್ತು ಪಾಂಚಜನ್ಯ ತಂಡಗಳ ನಡುವಿನ ಕೊನೆಯ ಕ್ವಾಟರ್ ಫೈನಲ್ ಪಂದ್ಯದ ಅಂತಿಮ ಕ್ಷಣದಲ್ಲಿ ವಿವಾದ ಉಂಟಾಗಿತ್ತು. ಇದರಿಂದ ಸಾಕಷ್ಟು ಗೊಂದಲದಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದೆ ಸಂಘಟಕರು ಪಂದ್ಯಾಟವನ್ನು ರದ್ದುಗೊಳಿಸಿದ್ದರು.
ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ಇತ್ಯರ್ಥಗೊಳಿಸಿ, ಕ್ವಾಟರ್ ಫೈನಲ್‌ನಲ್ಲಿ ವಿವಾದ ಉಂಟು ಮಾಡಿದ್ದ ಜಾನ್ಸನ್ ಕುಂದಾಪುರವನ್ನು ಕೈ ಬಿಟ್ಟು, ಖುಷಿ ಅಮರ್ ಪಾಂಚಜನ್ಯವನ್ನು ಸೆಮಿಫೈನಲ್‌ಗೆ ಪ್ರವೇಶಿಸಿದ ತಂಡ ಎಂಬುದಾಗಿ ಘೋಷಿಸಲಾಯಿತು.
ಅದರಂತೆ ಸೆಮಿಫೈನಲ್ ಪ್ರವೇಶಿಸಿದ ಜಯ ಕರ್ನಾಟಕ ಬೆಂಗಳೂರು ಹಾಗೂ ಫ್ರೆಂಡ್ಸ್ ಬೆಂಗಳೂರು ಮತ್ತು ಇಝಾನ್ ಚೈತನ್ಯ ಫೈರ್ಸ್ ಎಚ್.ಎಂ ಎಕ್ತಾ ಹಾಗೂ ಮತ್ತು ಖುಷಿ ಅಮರ್ ಪಾಂಚಜನ್ಯ ತಂಡಗಳ ಮಧ್ಯೆ ಅದೃಷ್ಟ ಆಯ್ಕೆ ನಡೆಸಲಾಯಿತು. ಇದರಲ್ಲಿ ಪಾಂಚಜನ್ಯ ಹಾಗೂ ಜಯಕರ್ನಾಟಕ ತಂಡ ಫೈನಲ್ ಪ್ರವೇಶಿಸಿತು. ಫೈನಲ್‌ನಲ್ಲಿ ನಾಣ್ಯ ಚಿಮ್ಮುಗೆ ಮೂಲಕ ಪಾಂಚಜನ್ಯ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.
ಟೂರ್ನಿ ಆಯೋಜಕ ಶಕೀಲ್ ಹೊನ್ನಾಳ ಪಂದ್ಯಾಟದ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಎಚ್‌ಎಂಸಿ ಯುನೈಟೆಡ್ ಗೌರವಾಧ್ಯಕ್ಷ ಕೆ.ಪಿ ಇಬ್ರಾಹಿಂ ಮಟಪಾಡಿ, ಮಾಜಿ ಅಧ್ಯಕ್ಷ ಸಂಜೀವ ಕೋಟ್ಯಾನ್, ದಿ ಯುನಿವರ್ಸಲ್ ಐಡಲ್‌ನ ಚೇರ್ಮನ್ ಶಫೀ ಅಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.