ಫೆ.12: ಕೇಂದ್ರ ಸರಕಾರದ 4 ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಜೆಸಿಟಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
ಉಡುಪಿ, ಜ.2: ದೇಶದ ಕೋಟ್ಯಾಂತರ ಮಂದಿ ಕಾರ್ಮಿಕರನ್ನು ಮಾಲಕರ ಗುಲಾಮರನ್ನಾಗಿಸುವ ಕೇಂದ್ರದ ನಾಲ್ಕು ನೂತನ ಕಾಮಿಕ ಸಂಹಿತೆಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ಒಂದು ದಿನ ಬೃಹತ್ ಪ್ರತಿಭಟನೆಯನ್ನು ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಫೆ.12ರಂದು ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊ ಳ್ಳಲಾಗುವುದು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ತಿಳಿಸಿದ್ದಾರೆ.
ಉಡುಪಿಯ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಕಾರ್ಮಿಕ ಸಂಘಟನೆ ಬಿಎಂಎಸ್‌ನ್ನು ಹೊರತು ಪಡಿಸಿ ದೇಶದ ಎಲ್ಲಾ 10 ಪ್ರಮುಖ ಕಾರ್ಮಿಕ ಸಂಘಟನೆಗಳು ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಘೋಷಿಸಿವೆ. ಅಲ್ಲದೇ ರೈತ, ಕಾರ್ಮಿಕ, ಕೃಷಿ ಕೂಲಿಕಾರ, ಮಹಿಳಾ, ವಿದ್ಯಾರ್ಥಿ-ಯುವಜನ, ವಿಮಾ, ಬ್ಯಾಂಕ್ ನೌಕರರ ಸಂಘಗಳು, ದಲಿತ ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲವನ್ನು ಸಾರಿವೆ ಎಂದು ಹೇಳಿದರು.
ದೇಶದಲ್ಲಿದ್ದ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರ ಅವುಗಳನ್ನು 4 ಕಾರ್ಮಿಕ ಸಂಹಿತೆಗಳನ್ನಾಗಿಸಿ ಕಳೆದ ನವೆಂಬರ್ 21ರಂದು ಅಧಿಕೃತವಾಗಿ ಜಾರಿಗೊಳಿಸುವ ಪ್ರಕಟಣೆ ನೀಡಿದೆ. ಈ ಸಂಹಿತೆಗಳು 2019 ಮತ್ತು 2020ರಲ್ಲೇ ಲೋಕಸಭೆಯಲ್ಲಿ ಪಾಸಾಗಿದ್ದರೂ, ದೇಶಾದ್ಯಂತ ಕಾರ್ಮಿಕ ವರ್ಗ ಇವುಗಳ ವಿರುದ್ಧ ನಡೆಸಿದ ಸತತ ಹೋರಾಟ ದಿಂದ ಅದನ್ನು ಜಾರಿಗೊಳಿಸಲು ಸಾದ್ಯವಾಗಿರಲಿಲ್ಲ ಎಂದವರು ಹೇಳಿದರು.
ಆದರೆ ಇದೀಗ ಕೇಂದ್ರದ ಬಿಜೆಪಿ ಸರಕಾರ ಕಾರ್ಪೋರೇಟ್ ಕಂಪೆನಿಗಳ ಹಾಗೂ ಬಂಡವಾಳಗಾರರ ಒತ್ತಡದಿಂದ ಈ ಎಲ್‌ಪಿಜಿ ನೀತಿಗಳನ್ನು ಆದ್ಯತೆ ಮೇಲೆ ಜಾರಿಗೊಳಿಸಲು ಮುಂದಾಗಿವೆ. ಇದರಿಂದಾಗಿ ವಿದ್ಯುತ್, ದೂರ ಸಂಪರ್ಕ, ಕಲ್ಲಿದ್ದಲು, ಗಣಿಗಾರಿಕೆ, ರೈಲ್ಲ, ಹೆದ್ದಾರಿ, ಬಂದರುಗಳೆಲ್ಲವೂ ಖಾಸಗಿ ಕಾರ್ಪೋರೇಟ್ ಕಂಪೆನಿಗಳಿಗೆ ವರ್ಗಾಯಿಸಲಾಗುತ್ತಿದೆ ಎಂದರು.
ಬಿಜೆಪಿ ಸರಕಾರ ಜಾರಿಗೆ ತಂದಿರುವ ಕಾರ್ಮಿಕ ಸಂಹಿತೆ ಜಾರಿಗೊಂಡರೆ ಬಂಡವಾಳಶಾಹಿಗಳಿಗೆ ಅಗ್ಗದ ದರದಲ್ಲಿ ಕಾರ್ಮಿಕರನ್ನು ಮಾರಾಟ ಮಾಡಲು ಅವಕಾಶವಿದೆ. ಇದರಿಂದ ಶ್ರೀಮಂತರು ಹಾಗೂ ಬಡವರ ನಡುವಿನ ಅಸಮಾನತೆ ಇನ್ನಷ್ಟು ಹೆಚ್ಚುವುದು ಖಂಡಿತ ಎಂದು ಸುರೇಶ್ ಕಲ್ಲಾಗರ ಹೇಳಿದರು.
ಜೆಟಿಸಿ ಉಡುಪಿ ಜಿಲ್ಲಾ ಸಮಿತಿಯ ಸಂಚಾಲಕ ಕವಿರಾಜ್ ಕಾಂಚನ್ ಮಾತನಾಡಿ, ಫೆ.12ರಂದು ಉಡುಪಿ ಜಿಲ್ಲೆಯ ಉಡುಪಿ ಅಜ್ಜರಕಾಡು ಹುತಾತ್ಮ ಚೌಕದ ಬಳಿ (ಬೆಳಗ್ಗೆ 10:30), ಕಾರ್ಕಳ ಬಸ್ ನಿಲ್ದಾಣದ ಬಳಿ (10:00), ಕುಂದಾಪುರದ ಸ್ತ್ರ ಸರ್ಕಲ್ ಬಳಿ (9:30) ಹಾಗೂ ಬೈಂದೂರಿನ ತಹಶೀಲ್ದಾರ್ ಕಚೇರಿ ಎದುರು (9:30)ಕ್ಕೆ ಪ್ರತಿಭಟನೆ ನಡೆಯಲಿದೆ ಎಂದರು.
ಉಡುಪಿಯಲ್ಲಿ ಬೆಳಗ್ಗೆ 9:30ಕ್ಕೆ ಜೆಸಿಟಿ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಹಳ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯಿಂದ ಪ್ರಾರಂಭಗೊಂಡು ಕೆಎಂ ಮಾರ್ಗ, ಕೋರ್ಟ್ ರೋಡ್, ಜೋಡುಕಟ್ಟೆ ಮಾರ್ಗವಾಗಿ ಸಾಗಿ ಅಜ್ಜರಕಾಡು ಹುತಾತ್ಮ ಚೌಕದ ಬಳಿ ಮುಕ್ತಾಯಗೊಂಡು ಅಲ್ಲೇ ಬಹಿರಂಗ ಸಭೆ ನಡೆಯಲಿದೆ ಎಂದರು.
ಪತ್ರಿಕಾಗೋಷಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ, ಇಂಟಕ್‌ನ ಕಿರಣ್ ಹೆಗ್ಡೆ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ವಿ, ಎಐಟಿಯುಸಿಯ ಯು.ಶಿವಾನಂದ ಉಪಸ್ಥಿತರಿದ್ದರು.