×
Ad

ಪ್ರವಾಸಿ ಬೋಟು, ವಾಟರ್‌ಸ್ಪೋರ್ಟ್ಸ್‌ಗಳಿಗೆ ಪರವಾನಿಗೆ ಪಡೆಯಲು 45 ದಿನಗಳ ಕಾಲಾವಕಾಶ: ಎಸ್ಪಿ ಹರಿರಾಂ ಶಂಕರ್

Update: 2026-02-02 20:13 IST

ಉಡುಪಿ, ಫೆ.2: ಉಡುಪಿ ಜಿಲ್ಲೆಯಲ್ಲಿ ಪ್ರವಾಸಿ ಬೋಟು ಸೇರಿದಂತೆ ವಾಟರ್ ಸ್ಪೋರ್ಟ್ಸ್‌ಗಳಿಗೆ ಪ್ರವಾಸೋದ್ಯಮ ಸಹಿತ ವಿವಿಧ ಇಲಾಖೆಗಳಿಂದ ಅನುಮತಿ ಹಾಗೂ ಪರವಾನಿಗೆ ಪಡೆಯಲು 45 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಕರಾವಳಿ ಕಾವಲು ಪೊಲೀಸ್ ಪ್ರಭಾರ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

ಪ್ರವಾಸಿ ಬೋಟ್/ಹೌಸ್ ಬೋಟ್/ಕಯಾಕಿಂಗ್/ಪ್ರವಾಸಿ ದೋಣಿ/ಪ್ಯಾರಜೂಟ್/ಬನಾನರೈಡ್/ಸರ್ಫಿಂಗ್/ಜೆಟ್ಟಿ/ಬಂಫಿ/ಬೋಟ್ ರೈಂಡಿಂಗ್ ಎಂಬ ವಾಟರ್ ಸ್ಪೋರ್ಟ್ಸ್ ನಡೆಸುತ್ತಿರುವವರು ವಿವಿಧ ಇಲಾಖೆಗಳಿಂದ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಹಾಗೂ ಪರವಾನಿಗೆ ಪಡೆಯಲು 45 ದಿನಗಳ ಕಾಲಾವಕಾಶ ನೀಡಲಾಗಿದೆ.

45 ದಿನಗಳ ನಂತರವೂ ನಿಯಮ ಮತ್ತು ಕಾನೂನು ಮೀರಿ ಜಲಕ್ರೀಡೆ ನಡೆಸಿ, ಯಾವುದೇ ದುರಂತ ಸಂಭವಿಸಿ ಯಾರಾದರೂ ಮೃತರಾದರೆ ಕಲಂ 105ರ ಭಾರತೀಯ ನ್ಯಾಯ ಸಂಹಿತೆ 2023ರ ಅಡಿಯಲ್ಲಿ ಅಪರಾಧ ವಾಗುತ್ತದೆ. ಆದುದರಿಂದ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದು ಜಲಕ್ರೀಡೆಗಳನ್ನು ನಡೆಸಬೇಕು ಎಂದು ಅವರು ತಿಳಿಸಿದರು.

ಮೋಟರೈಸ್ ಬೋಟು ನಡೆಸಲು ಬಂದರು ಇಲಾಖೆಯಿಂದ ನೊಂದಾವಣಾ ಪ್ರಮಾಣ ಪತ್ರ, ಸಂಬಂಧ ಪಟ್ಟ ವಿವಿಧ ಇಲಾಖೆಗಳಿಂದ ನಿರಪೇಕ್ಷಣಾ ಪತ್ರ ಹೊಂದಿರಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಪತ್ರ, ವಿಮಾ ಪ್ರಮಾಣ ಪತ್ರ, ಬೋಟ್ ನಡೆಸಲು ಸಾರಂಗ ಪ್ರಮಾಣ ಪತ್ರ ಇರಬೇಕು.

ನಾನ್ ಮೋಟರೈಸ್ ಬೋಟ್/ದೋಣಿ ನಡೆಸಲು ಸಂಬಂಧಪಟ್ಟ ವಿವಿಧ ಇಲಾಖೆಗಳಿಂದ ನಿರಪೇಕ್ಷಣಾ ಪತ್ರ ಹೊಂದಿರಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಪತ್ರ, ವಿಮಾ ಪ್ರಮಾಣ ಪತ್ರ, ಬೋಟ್ ನಡೆಸಲು ಸಾರಂಗ ಪ್ರಮಾಣ ಪತ್ರ, ವಾಟರ್ ಸೋರ್ಟ್ಸ್ ನಡೆಸಲು ನ್ಯಾಶನಲ್ ಇಸ್ಟಿಟ್ಯೂಟ್ ಆಫ್ ವಾಟರ್ ಸ್ಪೋರ್ಟ್ಸ್‌ನ ಪ್ರಮಾಣ ಪತ್ರ ಹೊಂದಿರಬೇಕು.

ಕಯಾಕಿಂಗ್/ಪ್ಯಾರಚೂಟ್/ಬನಾನ ರೈಡ್/ಜೆಟ್ಲಿ ನಡೆಸಲು ಸಂಬಂಧ ಪಟ್ಟ ವಿವಿಧ ಇಲಾಖೆಗಳಿಂದ ನಿರಪೇಕ್ಷಣಾ ಪತ್ರ, ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಪತ್ರ, ಜೆಟ್ಲಿ ನಡೆಸಲು ಸಾರಂಗ ಪ್ರಮಾಣ ಪತ್ರ, ವಾಟರ್ ಸೋರ್ಟ್ಸ್ ನಡೆಸಲು ನ್ಯಾಶನಲ್ ಇಸ್ಟಿಟ್ಯೂಟ್ ಆಫ್ ವಾಟರ್ ಸ್ಪೋರ್ಟ್ಸ್‌ನ ಪ್ರಮಾಣ ಪತ್ರ ಹೊಂದಿರಬೇಕು.

ಜಲಕ್ರೀಡೆ ನಡೆಸುವ ಸಮಯದಲ್ಲಿ ಪ್ರವಾಸಿಗರಿಗೆ ಲೈಪ್ ಜಾಕೇಟ್‌ನ್ನು ಕಡ್ಡಾಯವಾಗಿ ಧರಿಸುವಂತೆ ಕ್ರಮ ಕೈಗೊಳ್ಳಬೇಕು. ಲೈಫ್‌ಬಾಯ್, ಪ್ರಥಮ ಚಿಕಿತ್ಸೆ ಕಿಟ್, ಅಗ್ನಿಶಾಮಕ ಸಾಧನ ಹಾಗೂ ಇನ್ನಿತರ ಸುರಕ್ಷತಾ ಸಲಕರಣೆಗಳನ್ನು ಬೋಟ್/ದೋಣಿಯಲ್ಲಿ ಇಟ್ಟುಕೊಳ್ಳಬೇಕು. ಸಂಬಂಧ ಪಟ್ಟ ಮಾಲಕರು ಜಲಕ್ರೀಡೆ ನಡೆಸುವ ಸ್ಥಳದಲ್ಲಿ ಪ್ರವಾಸಿಗರಿಗೆ/ಸಾರ್ವಜನಿಕರಿಗೆ ಫಲಕಗಳನ್ನು ಅಳವಡಿಸಿ ಅರಿವು ಮೂಡಿಸಬೇಕು.

ಸಾರಂಗ ಪತ್ರವನ್ನು ಹೊಂದಿದವರು ಮಾತ್ರ ಬೋಟ್ ಚಲಾಯಿಸಬೇಕು. ಸಂಬಂಧಪಟ್ಟ ಪ್ರಾಧಿಕಾರದವರು ನಾವೆಯ ಪರಿಶೀಲನೆ ಸಮಯದಲ್ಲಿ ದಾಖಲಾತಿಗಳನ್ನು ಕೇಳಿದ್ದಲ್ಲಿ ಅವುಗಳನ್ನು ಕಡ್ಡಾಯವಾಗಿ ಹಾಜರುಪಡಿಸ ಬೇಕು. ಯಾವುದೇ ರೀತಿಯ ಜಲಕ್ರೀಡೆ ನಡೆಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ನಿರಪೇಕ್ಷಣಾ ಪತ್ರವನ್ನು ಪಡೆದು ಕಾಯನಿರ್ವಹಿಸಬೇಕು ಎಂದು ಎಸ್ಪಿ ಪ್ರಕಟಣೆಯಲ್ಲಿ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News