ಫೆ.8: ಮಣಿಪಾಲ ಮ್ಯಾರಥಾನ್‌ಗೆ 22,000ಕ್ಕೂ ಅಧಿಕ ಕ್ರೀಡಾಳುಗಳು
ಉಡುಪಿ, ಫೆ.2: ರಾಷ್ಟ್ರ ಮಟ್ಟದ ಮಾನ್ಯತೆ ಹಾಗೂ ಜಾಗತಿಕ ಮಟ್ಟದಲ್ಲಿ ಗುರುತಿಸ್ಪಟ್ಟಿರುವ ‘ಮಣಿಪಾಲ ಮ್ಯಾರಥಾನ್’ನ ಎಂಟನೇ ಆವೃತ್ತಿ ಇದೇ ಫೆ.8ರಂದು ಮಣಿಪಾಲ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆಯಲಿದ್ದು, ಈ ಬಾರಿ ದಾಖಲೆಯ 22,000ಕ್ಕೂ ಅಧಿಕ ಓಟಗಾರರು ವಿದೇಶಗಳಿಂದ ಹಾಗೂ ದೇಶಾದ್ಯಂತದಿಂದ ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.
ಮಣಿಪಾಲದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, 42ಕಿ.ಮೀ.ಗಳ ಫುಲ್ ಮ್ಯಾರಥಾನ್, 21 ಕಿ.ಮೀ.ನ ಹಾಫ್ ಮ್ಯಾರಥಾನ್, 10ಕಿ.ಮೀ, 5ಕಿ.ಮೀ. ಹಾಗೂ ಮೂರು ಕಿ.ಮೀ. ವಿಭಾಗಗಳಲ್ಲಿ ವಿವಿಧ ವಯೋಮಾನದವರಿಗೆ ಸ್ಪರ್ಧೆಗಳು ನಡೆಯಲಿವೆ ಎಂದರು.
‘ಹಸಿರು ಹಾಗೂ ಸುಸ್ಥಿರ ಭವಿಷ್ಯಕ್ಕಾಗಿ ಓಟ’ ಎಂಬ ಸಂದೇಶದಡಿ ಈ ಬಾರಿ ಮ್ಯಾರಥಾನ್ ನಡೆಯಲಿದ್ದು, ಫೆ.8ರ ರವಿವಾರ ಮುಂಜಾನೆ 5:00ಗಂಟೆಗೆ ಕೆಎಂಸಿ ಗ್ರೀನ್ಸ್‌ನಲ್ಲಿ ಫುಲ್ ಮ್ಯಾರಥಾನ್‌ಗೆ ಚಾಲನೆ ನೀಡಲಾ ಗುವುದು ಎಂದ ಅವರು ಹಾಫ್ ಮ್ಯಾರಥಾನ್ ಅಲ್ಲಿಂದಲೇ ಬೆಳಗ್ಗೆ 5:30ಕ್ಕೆ ಪ್ರಾರಂಭಗೊಳ್ಳಲಿದೆ. 6:00ಗಂಟೆಗೆ 10ಕಿ.ಮೀ., 6:20ಕ್ಕೆ 5ಕಿ.ಮೀ. ಹಾಗೂ 7:30ಕ್ಕೆ ಮೂರು ಕಿ.ಮೀ. ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಲಾಗುತ್ತದೆ. ವಿಶೇಷ ಚೇತನರಿಗಾಗಿ ಹಮ್ಮಿಕೊಂಡಿರುವ ಓಟಕ್ಕೆ 8:30ಕ್ಕೆ ಹಸಿರು ನಿಶಾನೆ ತೋರಿಸಲಾಗುತ್ತದೆ ಎಂದು ಡಾ.ಬಲ್ಲಾಳ್ ವಿವರಿಸಿದರು.
ಎಲ್ಲಾ ವಿಭಾಗಗಳಲ್ಲೂ ಒಟ್ಟಾರೆಯಾಗಿ ದಾಖಲೆಯ 22,000ಕ್ಕೂ ಅಧಿಕ ಮಂದಿ ಈಗಾಗಲೇ ಹೆಸರು ನೊಂದಾಯಿಸಿಕೊಂಡಿದ್ದಾರೆ. ಫುಲ್ ಮ್ಯಾರಥಾನ್‌ನಲ್ಲಿ ದುಬಾಯಿ, ಇಂಗ್ಲೆಂಡ್, ಇಥಿಯೋಪಿಯಾ, ಜರ್ಮನಿ, ಜಪಾನ್, ಕಿನ್ಯಾ, ಮಲೇಷಿಯಾ, ನೇಪಾಳ, ಶ್ರೀಲಂಕಾ, ಅಮೆರಿಕ ಸೇರಿದಂತೆ ಇನ್ನೂ ಅನೇಕ ದೇಶಗಳ 100ಕ್ಕೂ ಅಧಿಕ ಮಂದಿ ಹೆಸರು ನೊಂದಾಯಿಸಿ ಕೊಂಡಿದ್ದಾರೆ ಎಂದರು.
ಮಣಿಪಾಲ ಮ್ಯಾರಥಾನ್‌ನ ವಿಜೇತರಿಗೆ 25ಲಕ್ಷ ರೂ.ಗಳಿಗೂ ಅಧಿಕ ಬಹುಮಾನ ಮೊತ್ತವನ್ನು ನೀಡಲಾಗುತ್ತದೆ. ಫುಲ್ ಮ್ಯಾರಥಾನ್‌ನಲ್ಲಿ ಮೊದಲಿಗರಾಗಿ ಗುರಿತಲುಪುವ ಪುರುಷ ಮತ್ತು ಮಹಿಳಾ ಅಥ್ಲೀಟ್‌ಗೆ ತಲಾ 1,00,000ರೂ. ನಗದು ಬಹುಮಾನವಿರುತ್ತದೆ. ರನ್ನರ್‌ಅಪ್‌ಗೆ ತಲಾ 75,000ರೂ., ತೃತೀಯ ಸ್ಥಾನಿಗೆ 50,000ರೂ.ನಗದು ಬಹುಮಾನ ದೊರೆಯಲಿದೆ ಎಂದು ಮಾಹೆಯ ಕ್ರೀಡಾ ಸಮಿತಿಯ ಕಾರ್ಯದರ್ಶಿ ಡಾ. ವಿನೋದ್ ನಾಯಕ್ ತಿಳಿಸಿದರು.
ಅದೇರೀತಿ 21ಕಿ.ಮೀ.ಗಳ ಹಾಫ್ ಮ್ಯಾರಥಾನ್‌ನ ಎರಡೂ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನ ಪಡೆಯುವ ವರು ತಲಾ 50,000ರೂ., 30,000ರೂ. ಹಾಗೂ 20,000ರೂ. ಗೆಲ್ಲಲಿದ್ದಾರೆ. 10ಕಿ.ಮೀ.ನ ವಿಜೇತರಿಗೆ ಕ್ರಮವಾಗಿ 20ಸಾವಿರ, 15 ಸಾವಿರ ಹಾಗೂ 10ಸಾವಿರ ರೂ. ನಗದು ಬಹುಮಾನಗಳಿವೆ. 5ಕಿ.ಮೀ. ಓಟದ ವಿಜೇತರಿಗೆ ಕ್ರಮವಾಗಿ 10ಸಾವಿರ, 7ಸಾವಿರ ಹಾಗೂ 5ಸಾವಿರ ರೂ. ದೊರೆಯಲಿದೆ. ಅಲ್ಲದೇ 40ವರ್ಷ ಮೇಲ್ಪಟ್ಟವರಿಗೆ, 50 ವರ್ಷ ಮೇಲ್ಪಟ್ಟವರಿಗೆ ಹಾಗೂ 60ವರ್ಷ ಮೇಲ್ಪಟ್ಟವರಿಗೂ ಪ್ರತ್ಯೇಕ ಬಹುಮಾನಗಳಿರುತ್ತವೆ ಎಂದು ಡಾ.ನಾಯಕ್ ವಿವರಿಸಿದರು.
ಫುಲ್ ಮ್ಯಾರಥಾನ್ ಮಾಹೆ ಗ್ರೀನ್ಸ್‌ನಿಂದ ಪ್ರಾರಂಭಗೊಂಡು ಪೆರಂಪಳ್ಳಿ, ಅಂಬಾಗಿಲು, ಸಂತೆಕಟ್ಟೆ, ಕೆಮ್ಮಣ್ಣು, ಹೂಡೆ, ಮಲ್ಪೆ ಬೀಚ್, ಕಲ್ಮಾಡಿ, ಕಿದಿಯೂರು, ಉದ್ಯಾವರ, ಕಿನ್ನಿಮೂಲ್ಕಿ , ಉಡುಪಿ, ಕಲ್ಸಂಕ ಮಾರ್ಗವಾಗಿ ಮಾಹೆ ತಲುಪಲಿದೆ. 10ಕಿ.ಮೀ. ಓಟವನ್ನು ವಿಶೇಷವಾಗಿ ಕೊಳಲಗಿರಿ ಹಾವಂಜೆ ಬಳಿ ನಿರ್ಮಿಸಿರುವ ಮಣಿಪಾಲ ಹಾಸ್ಪಿಸ್ ಆ್ಯಂಡ್ ರಿಸ್ಪೈಟ್ ಕೇಂದ್ರದ ಮೂಲಕ ಓಡಿಸಲಾಗುವುದು ಎಂದು ಡಾ.ಶರತ್‌ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಯಶಪಾಲ್ ಸುವರ್ಣ, ಮಾಹೆಯ ಅಧಿಕಾರಿಗಳಾದ ಡಾ.ನಾರಾಯಣ ಸಭಾಹಿತ್, ಡಾ.ಗಿರಿಧರ್ ಕಿಣಿ ಮುಂತಾದವರು ಉಪಸ್ಥಿತರಿದ್ದರು.
ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಸನ್ಮಾನ
ಕಳೆದ ನವೆಂಬರ್ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡೆದ ಮೊದಲ ಅಂಧ ಮಹಿಳೆಯರ ಟ್ವೆಂಟಿ20 ವಿಶ್ವಕಪ್ ಕ್ರಿಕೆಟ್‌ನ್ನು ಗೆದ್ದುಕೊಂಡಿರುವ ಭಾರತೀಯ ಮಹಿಳಾ ತಂಡವನ್ನು ಫೆ.7ರಂದು ಸಂಜೆ ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿ ವ್ಯೂ ನಲ್ಲಿ ನಡೆಯುವ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ಮಾಹೆಯ ಕುಲಪತಿಗಳಾದ ಲೆ.ಜ.ಡಾ. ಎಂ.ಡಿ.ವೆಂಕಟೇಶ್ ತಿಳಿಸಿದರು.
ದೈಹಿತ ನ್ಯೂನತೆಯ ಹೊರತಾಗಿಯೂ ಭಾರತೀಯ ಮಹಿಳೆಯರು ತೋರಿದ ದಿಟ್ಟ ಪ್ರದರ್ಶನವನ್ನು ಪ್ರೋತ್ಸಾಹಿ ಸುವ ದೃಷ್ಟಿಯಿಂದ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡವನ್ನು ಸನ್ಮಾನಿಸಲಾಗುತ್ತಿದೆ ಎಂದು ಅವರು ವಿವರಿಸಿದರು.