ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಕೊಲ್ಲೂರು, ಮೇ 7: ಸಂಬಂಧಿಯೊಬ್ಬರಿಗೆ ದೂರವಾಣಿ ಕರೆ ಮಾಡಿ ತಾನು ಇಂಥ ಸ್ಥಳದಲ್ಲಿ ವಿಷಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ ವ್ಯಕ್ತಿಯೊಬ್ಬರು ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಜಡ್ಕಲ್ ಗ್ರಾಮದಿಂದ ವರದಿಯಾಗಿದೆ.
ಮೃತರನ್ನು ಅಲ್ಲಿನ ನಾರಾಯಣ ನಾಯ್ಕ್ (52) ಎಂದು ಗುರುತಿಸಲಾಗಿದೆ. ಇವರು ಮೇ6ರಂದು ಬೆಳಗ್ಗೆ 10:30ರ ಸುಮಾರಿಗೆ ಸಂಬಂಧಿ ಜಲಜಾ ಎಂಬವರಿಗೆ ಕರೆ ಮಾಡಿ ತಾನು ದೊಡ್ಡಬಾಳೆ ಕಾಡಿನಲ್ಲಿ ವಿಷಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದು, ಅದರಂತೆ ಧಾವಿಸಿಬಂದ ಸಂಬಂಧಿಗಳು ಕಾಡಿನಲ್ಲಿ ಹುಡುಕಾಡಿದಾಗ ಒಂದು ಮರದ ಕೆಳಗೆ ಬಿದ್ದುಕೊಂಡಿದ್ದನ್ನು ನೋಡಿದರು.
ಕೂಡಲೇ ನಾರಾಯಣ ನಾಯ್ಕರನ್ನು ಅಂಬುಲೆನ್ಸ್‌ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ, ಅಲ್ಲಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲ ಕಾರಿಯಾಗದೇ ಅವರು ಇಂದು ಬೆಳಗಿನ ಜಾವ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.