ಬದಲಾದ ಸಮಾಜದ ಪಲ್ಲಟ, ತಲ್ಲಣ ಗುರುತಿಸಲು ಕಾರಂತರ ಕಾದಂಬರಿಗಳ ಅಧ್ಯಯನ ಮುಖ್ಯ: ಡಾ.ಕೆ. ಚಿನ್ನಪ್ಪ ಗೌಡ
ಡಾ.ಕಾರಂತರ ಕುರಿತು ವಿಚಾರಸಂಕಿರಣ, ನಾಟಕ ಪ್ರದರ್ಶನ
ಉಡುಪಿ, ಜೂ.16: ಡಾ.ಕೆ.ಶಿವರಾಮ ಕಾರಂತರ ಕೃತಿಗಳೆಲ್ಲವೂ ಅಧ್ಯಯನಕ್ಕೆ ಯೋಗ್ಯವಾದವೇ ಆಗಿವೆ. ಅದರಲ್ಲೂ ಬದಲಾದ ಸಮಾಜದ ಪಲ್ಲಟ, ತಲ್ಲಣಗಳನ್ನು ಗುರುತಿಸಲು ಕಾರಂತರ ಕಾದಂಬರಿಗಳು ಅತ್ಯಂತ ಸೂಕ್ತ ಆಕರಗಳು ಎಂದು ಖ್ಯಾತ ಜಾನಪದ ವಿದ್ವಾಂಸ ಹಾಗೂ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಡಾ.ಕೆ. ಚಿನ್ನಪ್ಪ ಗೌಡ ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯ ಮಂಗಳ ಗಂಗೋತ್ರಿ, ಡಾ.ಶಿವರಾಮ ಕಾರಂತ ಅಧ್ಯಯನ ಪೀಠ ಮಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಶಿವರಾಮ ಕಾರಂತ ಬದುಕು-ಬರಹ ಸಂಶೋಧನೆಗಳ ಸಾಧ್ಯತೆಗಳು ಎಂಬ ವಿಷಯದ ಕುರಿತು ಇಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿ ಸಲಾಗಿದ್ದ ಒಂದು ದಿನದ ವಿಚಾರ ಸಂಕಿರಣ ಮತ್ತು ‘ನಾನು ಕಾರಂತ’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾರಂತರ ಕಾದಂಬರಿಗಳ ಚೌಕಟ್ಟುಗಳೇ ಉತ್ತಮವಾದ ಅಧ್ಯಯನಕ್ಕೆ ಯೋಗ್ಯವಾಗಿವೆ. ಪಾತ್ರಗಳ ಮೂಲಕ ಅವರು ಉದಾತ್ತ ಮನುಷ್ಯರನ್ನು ಸೃಷ್ಟಿ ಸುತ್ತಾರೆ. ಬದುಕಿನ ಒಳಗಿನ ವಾಸ್ತವದ ನೆಲೆಯಲ್ಲಿ ಅವು ಹೆಚ್ಚು ಹತ್ತಿರ ವಾಗುತ್ತವೆ. ಅವರು ನೆಲದ ಮಣ್ಣಿನಲ್ಲಿ ಬೇರುಬಿಟ್ಟ ಪಾತ್ರಗಳನ್ನು ಸೃಷ್ಟಿಸುತ್ತಾರೆ ಎಂದು ವಿಶ್ಲೇಷಿಸಿದರು.
ಕಾರಂತರ ಕೃತಿಗಳು ಓದು-ಮರುಓದಿನ ಅತ್ಯಂತ ಪ್ರಸಕ್ತವಾಗಿವೆ. 95ವರ್ಷಗಳ ಕಾಲ ಬದುಕಿದ್ದ ಕಾರಂತರ ಬದುಕು ಆಸಕ್ತರಿಗೆ ಅತ್ಯಂತ ಕುತೂಹಕರ. ಇದರಲ್ಲಿ ಅವರು 70ರಿಂದ 75ವರ್ಷಗಳನ್ನು ಪ್ರಜ್ಞಾ ಪೂರ್ವಕವಾಗಿ ಬದುಕಿದ್ದಾರೆ. ಈ ಅವಧಿಯಲ್ಲಿ ಅವರು 400ಕ್ಕೂ ಅಧಿಕ ಕೃತಿಗಳಲ್ಲಿ ಬರೆದ ಒಟ್ಟು ಪುಟಗಳ ಸಂಖ್ಯೆ ಒಂದು ಲಕ್ಷವನ್ನೂ ಮೀರುತ್ತವೆ ಎಂದು ವಿಮರ್ಶಕ ಡಾ.ಸಿ.ಎನ್.ರಾಮಚಂದ್ರ ಹೇಳಿದ್ದಾರೆ ಎಂದರು.
ಕಾರಂತರು ಕಾದಂಬರಿ ಬರವಣಿಗೆಗೆ ಬೇಕಾದ ಮಾಹಿತಿಗಳನ್ನು ಕ್ಷೇತ್ರಕಾರ್ಯದ ಮೂಲಕವೇ ಸಂಗ್ರಹಿಸಿದ್ದಾರೆ. 30-40ರ ದಶಕದಲ್ಲಿ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಅವರು ಅತಿಹೆಚ್ಚು ಕ್ಷೇತ್ರಕಾರ್ಯ ನಡೆಸಿದ್ದಾರೆ. ಈ ಅವಧಿಯಲ್ಲಿ ಅವರು ದೇಶ-ವಿದೇಶಗಳನ್ನು ಸುತ್ತಿದ್ದಾರೆ. ಒಟ್ಟಿನಲ್ಲಿ ಎಂಥವರಿಗೂ ಶಾಕ್ ಕೊಡುವ ವ್ಯಕ್ತಿತ್ವ ಕಾರಂತರದ್ದು ಎಂದರು.
ಅನುಭವ ಕೇಂದ್ರಿತ ಬರವಣಿಗೆ: ಡಾ.ಶಿವರಾಮ ಕಾರಂತರದ್ದು ಅನುಭವ ಕೇಂದ್ರಿತ ಬರವಣಿಗೆ.ಅತಿಶಯೋಕ್ತಿ ಬರವಣಿಗೆಗೆ ಅವರೆಂದೂ ಒಪ್ಪುತ್ತಲೇ ಇರಲಿಲ್ಲ. ಅಧಿಕೃತವಾಗಿ ಕಣ್ಣಿಗೆ ಕಾಣುವುದನ್ನು, ಕಿವಿಗೆ ಕೇಳಿದ್ದನ್ನು, ಅನುಭವಕ್ಕೆ ವೇದ್ಯವಾದುದನ್ನು ಮಾತ್ರ ಅವರು ಬರವಣಿಗೆ ಮೂಲಕ ಪ್ರಸ್ತುತ ಪಡಿಸಿದ್ದಾರೆ ಎಂದು ಡಾ.ಗೌಡ ವಿವರಿಸಿದರು.
ಕಾರಂತರು ಪ್ರಾದೇಶಿಕ ಲೇಖಕರಾಗಿರಬಹುದು. ಅವರದು ಪ್ರಾದೇಶಿಕ ಕತೆಯೂ ಆಗಿರಬಹುದು. ಅದರ ಮೂಲಕ ಅವರು ಮಂಡಿಸಿದ ವಿಚಾರಗಳು ಸಾರ್ವಕಾಲಿಕವಾದುದು. ಅದರ ಮೂಲಕ ಜಾಗತಿಕ ಮುಖಗಳನ್ನು ಅವರು ಸಾರ್ವಕಾಲಿಕವಾಗಿ ತೆರೆದಿಟ್ಟ ಲೇಖಕರಾಗಿದ್ದಾರೆ. ಇವೆಲ್ಲವೂ ಅಧ್ಯಯನ ಯೋಗ್ಯ ವಿಷಯಗಳಾಗಿವೆ ಎಂದರು.
ಮಂಗಳೂರು ವಿವಿ ಡಾ.ಶಿವರಾಮ ಕಾರಂತ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ನಾಗಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಎಸ್‌ವಿಪಿ ಕನ್ನಡ ಅಧ್ಯಯನ ಕೇಂದ್ರದ ಉಪನ್ಯಾಸಕ ಡಾ.ಧನಂಜಯ ಕುಂಬ್ಲೆ, ಸಂಪನ್ಮೂಲ ವ್ಯಕ್ತಿ ಡಾ.ರೇಖಾ ಬನ್ನಾಡಿ, ಪ್ರತಿಕ್ರಿಯೆ ನೀಡಿದ ಕವಯಿತ್ರಿ ಜ್ಯೋತಿ ಗುರುಪ್ರಸಾದ್, ಡಾ.ನಿಕೇತನ, ರಾಜಶ್ರೀ ಟಿ.ಪೆರ್ಲ, ಕಾರಂತ ಟ್ರಸ್ಟ್‌ನ ಜಿ.ಎಂ.ಶರೀಫ್ ಹೂಡೆ, ಡಾ.ಎಂ.ಪ್ರಸಾದ್ ರಾವ್ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರೆ, ಉಡುಪಿ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಆಶಯ ನುಡಿಗಳನ್ನಾಡಿದರು. ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರೆ, ಡಾ.ಚೇತನ್ ಶೆಟ್ಟಿ ಕೋವಾಡಿ ವಂದಿಸಿದರು.
ಸಂಶೋಧಕ ಓದಿಗೆ ಪ್ರಾಶಸ್ತ್ಯ ನೀಡಬೇಕು
ಒಬ್ಬ ಉತ್ತಮ ಸಂಶೋಧಕ ಒಳ್ಳೆಯ ಓದಿಗೆ ಪ್ರಾಶಸ್ತ್ಯ ನೀಡಬೇಕು. ಓದುವುದು ಸಂಶೋಧನೆಯ ಮೊದಲ ಕೆಲಸ. ಸಾಂಸ್ಕೃತಿಕ ಅಧ್ಯಯನ, ಸಂಶೋಧನೆಗೆ ಪಾಡ್ದನಗಳು ಅತ್ಯುತ್ತಮ ಆಕರಗಳು. ಪಾಡ್ದನಗಳು ತುಳುನಾಡಿನ ದೈವದ ಕತೆಗಳು. ಅದರಲ್ಲಿರುವುದೂ ಮನುಷ್ಯರ ಕತೆಗಳೇ. ಇದರ ಸಂಶೋಧಕ ವಲಸೆ, ಸಂಘರ್ಷ, ಸಮನ್ವಯ ವನ್ನು ನೆಲೆಯಾಗಿಟ್ಟುಕೊಂಡು ಸಂಶೋಧನೆ ಮಾಡಬೇಕು ಎಂದು ಡಾ.ಚಿನ್ನಪ್ಪ ಗೌಡ ಕಿವಿಮಾತು ಹೇಳಿದರು.
ಪಾಡ್ದನಗಳು ಸಮಾಜದ ಸೃಷ್ಟಿ. ಅದರ ಧ್ವನಿಯನ್ನು ಸೂಚಿಸುತ್ತದೆ. ನಮ್ಮ ಅಜ್ಜಿ ಕತೆಗಳು ಸಹ ಆಧ್ಯಯನಕ್ಕೆ ಯೋಗ್ಯವಾಗಿವೆ ಎಂದು ಪ್ರೊ.ಗೌಡ ನುಡಿದರು.
ಡಾ.ಕಾರಂತರು ಮೂಢನಂಬಿಕೆ ಹಾಗೂ ಶೃದ್ಧೆಯ ನಡುವಿನ ವ್ಯತ್ಯಾಸ ಅರಿತಿದ್ದರು.ಅವರು ಜೀವನದ ಮೂಲಕ ಹಾಗೂ ತಮ್ಮ ಕಾದಂಬರಿ ಹಾಗೂ ಕೃತಿಗಳ ಮೂಲಕ ಜೀವನ ಶೃದ್ಧೆ ಮತ್ತು ದುಡಿಮೆ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ.
-ಡಾ.ಕೆ.ಚಿನ್ನಪ್ಪ ಗೌಡ, ಜಾನಪದ ವಿದ್ವಾಂಸ ಮಂಗಳೂರು.