ಉಡುಪಿ| ಗಾಳಿಯೊಂದಿಗೆ ಮಳೆ; ನಾಲ್ಕು ಮನೆಗಳಿಗೆ ಹಾನಿ
ಉಡುಪಿ: ಜಿಲ್ಲೆಗೆ ಮುಂಗಾರು ಪ್ರವೇಶಿಸಿ 12 ದಿನಗಳಷ್ಟೇ ಆಗಿದ್ದರೂ, ಇಂದು ಸಹ ಹಗಲಿಡಿ ಮಳೆಯ ಸುಳಿವು ಕಂಡುಬರಲಿಲ್ಲ. ದಿನವಿಡೀ ಬೇಸಿಗೆಯಷ್ಟೇ ಪ್ರಖರವಾದ ಬಿಸಿಲಿದ್ದು, ರೈತರು ಹಾಗೂ ಜನರು ಮಳೆಗಾಗಿ ಕಾಯುವಂತಾಗಿದೆ.
ಸೋಮವಾರ ರಾತ್ರಿ ಗಾಳಿಯೊಂದಿಗೆ ಸಾಮಾನ್ಯ ಮಳೆಯಾಗಿದ್ದು, ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ನಾಲ್ಕು ಮನೆಗಳಿಗೆ ಹಾನಿಯಾದ ವರದಿ ಬಂದಿದೆ. ಕರ್ಕುಂಜೆಯ ಸುಧಾಕರ ಎಂಬವರ ಮನೆ ಮೇಲೆ ಮರಬಿದ್ದು ಭಾಗಶ: ಹಾನಿಯಾಗಿದ್ದು, 30ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕಂದಾವರ ಗ್ರಾಮದ ಗುಂಡು ಶೆಟ್ಟಿಗಾರ ಮನೆ ಮಳೆಯಿಂದ ಭಾಗಶ: ಹಾನಿಗೊಂಡಿದೆ. ಕಾಳಾವರ ಗ್ರಾಮದ ರಾಮಚಂದ್ರ ನಾವಡರ ಮನೆ ಮೇಲೆ ಮರಬಿದ್ದು 10ಸಾವಿರ ಹಾಗೂ ಬಸ್ರೂರಿನ ಶಾಂತಾ ಎಂಬವರ ಮನೆ ಮೇಲೆ ಮರಬಿದ್ದು 40,000ರೂ.ನಷ್ಟ ಉಂಟಾಗಿದೆ.
ಜಿಲ್ಲೆಯಲ್ಲಿ ದಿನದ 24 ಗಂಟೆಗಳಲ್ಲಿ ಕೇವಲ 1.2ಮಿ.ಮೀ. ಮಳೆಯಾಗಿದೆ. ಕಾರ್ಕಳದಲ್ಲಿ 4.1ಮಿ.ಮೀ., ಕುಂದಾಪುರ ದಲ್ಲಿ 0.8, ಉಡುಪಿಯಲ್ಲಿ 0.1, ಬೈಂದೂರಿನಲ್ಲಿ 0.8, ಬ್ರಹ್ಮಾವರದಲ್ಲಿ 0.2, ಕಾಪುವಿನಲ್ಲಿ 0.3 ಹಾಗೂ ಹೆಬ್ರಿಯಲ್ಲಿ 0.2ಮಿ.ಮೀ. ಮಳೆಯಾದ ವರದಿ ಬಂದಿದೆ.