ಎಸ್‌ಐಆರ್ ಬಗ್ಗೆ ಕಾಂಗ್ರೆಸ್‌ನಿಂದ ಜನಜಾಗೃತಿ ಕಾರ್ಯಕ್ರಮ
ಉಡುಪಿ, ಜೂ.16: ಜೂನ್ 30ರಿಂದ ಜುಲೈ 29ರ ವರೆಗೆ ನಡೆಯಲಿರುವ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಪ್ರತಿ ಗ್ರಾಪಂ ವ್ಯಾಪ್ತಿ ಯಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರು, ಬಿಎಲ್‌ಎ ಒಂದು, ಬಿಎಲ್‌ಎ 2 ಮತ್ತು ಕಾರ್ಯಕರ್ತರು ಸಂಪೂರ್ಣ ಸಜ್ಜಾಗಿದ್ದು, ಜೂ.23ರಂದು ಉಡುಪಿ ಜಿಲ್ಲೆಯ ಮನೆ ಮನೆ ಭೇಟಿ ನೀಡಿ ಎಸ್‌ಐಆರ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದಾರೆ. ಮನೆಮನೆ ಭೇಟಿಯ ಮೂಲಕ ಮಾಹಿತಿ ನೀಡಲಾಗುತ್ತದೆ ಮತ್ತು ಬೂತ್ ಮಟ್ಟದಲ್ಲಿ ಬಿಎಲ್‌ಎಗಳ ಮೂಲಕ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಜೂ.21ರಂದು ಬೆಂಗಳೂರಿನಲ್ಲಿ ನಡೆಯಲಿರುವ ನೂತನ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭಕ್ಕೆ ಜಿಲ್ಲೆಯ ಎಲ್ಲ ನಾಯಕರುಗಳು, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ 10 ಬ್ಲಾಕ್ ಅಧ್ಯಕ್ಷರು ಹಾಗೂ ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವರು ಎಂದು ಅವರು ಹೇಳಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಎಸ್‌ಐಆರ್ ಈಗಾಗಲೇ ಹಲವು ರಾಜ್ಯಗಳಲ್ಲಿ ಅನುಷ್ಠಾನ ಮಾಡಿದ್ದು ಲಕ್ಷಾಂತರ ಮಂದಿ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಆಯೋಗ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಮಹಿಳೆಯರು, ಬಡವರನ್ನು ಗುರಿ ಮಾಡಿಕೊಂಡು ಅವರ ಮತದಾನದ ಹಕ್ಕನ್ನು ಕಸಿಯುವ ಹುನ್ನಾರ ಮಾಡುತ್ತಿದೆ ಎಂದು ತಿಳಿಸಿದರು.
ಎಸ್‌ಐಆರ್ ಎಂಬುದು ಎನ್‌ಆರ್‌ಸಿ, ಸಿಎಎ ಇದರ ಪ್ರತಿರೂಪ ವಾಗಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿಯಾಗಿರುವ ಎಸ್‌ಐಆರ್‌ನಿಂದ ಆಗುವ ತೊಂದರೆಗಳಿಗೆ ಕೇಂದ್ರ ಸರಕಾರವೇ ನೇರ ಹೊಣೆಯಾಗಲಿದೆ. ಇದೆಲ್ಲವೂ ಚುನಾವಣೆ ಗೆಲ್ಲುವ ತಂತ್ರವಾಗಿ ಮಾಡ ಲಾಗುತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮತದಾರರ ಮತದಾನದ ಹಕ್ಕನ್ನು ಉಳಿಸಲು ಜಾಗೃತಿ ಕಾರ್ಯಕ್ರಮವನ್ನು ನಡೆಸಲಿದೆ ಎಂದು ಅವರು ಹೇಳಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಪ್ರಧಾನಿ ನೆಹರೂ ಅವಗಿಂತ ಮೋದಿ ಹೆಚ್ಚು ಕಾಲ ಪ್ರಧಾನಿಯಾ ದರು ಎಂಬುದು ಮುಖ್ಯ ಅಲ್ಲ. ಅವರು ಈ ದೇಶಕ್ಕೆ ಏನು ಮಾಡಿದರು ಎಂಬುದು ಮುಖ್ಯ. ನಮ್ಮ ಕಾರ್ಯಕರ್ತರು ಕೇಂದ್ರ ಸರಕಾರದ ವಿಫಲತೆಯನ್ನು ಮನೆ ಮನೆಗೆ ತಿಳಿಸುವ ಕೆಲಸ ಮುಂದಿನ ದಿನಗಳಲ್ಲಿ ಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳಕೆಬೈಲ್, ಮುಖಂಡರಾದ ಉದಯ ಶೆಟ್ಟಿ ಮುನಿಯಾಲ್, ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಹರೀಶ್ ಕಿಣಿ, ರಾಜು ಪೂಜಾರಿ, ಹರಿಪ್ರಸಾದ್ ರೈ, ಜ್ಯೋತಿ ಹೆಬ್ಬಾರ್, ಸುಭೋದ್ ರಾವ್, ಸಂತೋಷ್ ಕುಲಾಲ್, ವೈ.ಸುಕುಮಾರ್, ಗೋಪಿನಾಥ್ ಭಟ್, ಪ್ರಶಾಂತ್ ಜತ್ತನ್ನ, ರಮೇಶ್ ಕಾಂಚನ್, ಕಿಶೋರ್ ಎರ್ಮಾಳ್ ಮೊದಲಾದವರು ಉಪಸ್ಥಿತರಿದ್ದರು.