×
Ad

ಎಸ್‌ಐಆರ್ ಪ್ರಕ್ರಿಯೆಲ್ಲಿ ಪ್ರತಿಯೊಬ್ಬ ಅರ್ಹ ಮತದಾರ ಭಾಗವಹಿಸಿ: ಉಡುಪಿ ಡಿಸಿ ಸ್ವರೂಪ ಕರೆ

Update: 2026-06-23 20:12 IST

ಉಡುಪಿ, ಜೂ.23: ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಹೊಸ ಮತದಾರರ ಪಟ್ಟಿಯನ್ನು ತಯಾರಿಸಲಾ ಗುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ಭಾಗವಹಿಸಿ, ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿ ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಕರೆ ನೀಡಿದ್ದಾರೆ.

ಕುಂದಾಪುರದ ಭಂಡಾರ್‌ಕಾರ್ಸ್‌ ಪದವಿ ಕಾಲೇಜಿನಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್) 2026ರ ಸಂಬಂಧ ಕುಂದಾಪುರ ವಿಧಾನಸಭಾ ಕ್ಷೇತ್ರದ ಚುನಾಯಿತ ಜನಪ್ರತಿನಿಧಿಗಳು, ಮೇಲ್ವಿಚಾರಕರು, ಮತಗಟ್ಟೆ ಅಧಿಕಾರಿಗಳು ಹಾಗೂ ಮತಗಟ್ಟೆ ಏಜೆಂಟ್ ಅವರಿಗಾಗಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪ್ರಜಾ ಪ್ರಾತಿನಿದ್ಯ ಕಾಯ್ದೆ ಅಡಿಯಲ್ಲಿ ಮತದಾರರ ಪಟ್ಟಿ ತಯಾರಿ ಸುವುದು ಸಂವಿಧಾನಾತ್ಮಕ ಕರ್ತವ್ಯ. ಈ ನಿಟ್ಟಿನಲ್ಲಿ ದೇಶದಾದ್ಯಂತ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮವು ನಡೆಯುತ್ತಿದೆ. 2025ರ ಮತದಾರರ ಪಟ್ಟಿಯಲ್ಲಿರುವ ಹೆಸರುಗಳಿಗೆ ಸಂಬಂಧಿಸಿದಂತೆ 2002 ರಲ್ಲಿರುವ ಮತದಾರರ ಪಟ್ಟಿಯ ಮತದಾ ರರ ಕುಟುಂಬದ ಸಂತತಿಗಳಿಗೆ ಮ್ಯಾಪಿಂಗ್ ಮಾಡಿ ಲಿಂಕ್ ಮಾಡಲಾಗುತ್ತಿರುವುದರಿಂದ ಯಾವ ಅರ್ಹ ಮತದಾರರು ಮತದಾನದಿಂದ ವಂಚಿತರಾಗದಂತೆ ಎಚ್ಚರವಹಿಸಬೇಕು ಎಂದರು.

ಮತಗಟ್ಟೆ ಅಧಿಕಾರಿಗಳು ಜೂ.30ರಿಂದ ಜುಲೈ 29ರವರೆಗೆ 10 ದಿನಗಳ ಕಾಲ ಮನೆಮನೆಗೆ ಭೇಟಿ ನೀಡಿ ಪೂರ್ವ ದಲ್ಲಿ ಮುದ್ರಣಗೊಂಡಿರುವ ನಮೂನೆಯನ್ನು ದ್ವಿಪ್ರತಿಯಲ್ಲಿ ನೀಡುತ್ತಾರೆ. ಮತದಾರರು ಅದನ್ನು ಸಂಪೂರ್ಣ ಭರ್ತಿ ಮಾಡಿ ಈಗಿನ ಭಾವಚಿತ್ರ ಅಂಟಿಸಿ ಕಡ್ಡಾಯವಾಗಿ ಸಹಿ ಮಾಡಿ ಒಂದು ಪ್ರತಿಯನ್ನು ಮತಗಟ್ಟೆ ಅಧಿಕಾರಿಗೆ ಹಿಂದಿರುಗಿಸಬೇಕು. ಒಂದೊಮ್ಮೆ ನೀಡದೇ ಇದ್ದಲ್ಲಿ ಮತಗಟ್ಟೆ ಅಧಿಕಾರಿಗಳು ಮೂರು ಬಾರಿ ಪ್ರತಿ ಮನೆ ಬಾಗಿಲಿಗೆ ಭೇಟಿ ನೀಡಲಿದ್ದಾರೆ ಎಂದರು.

ಬೂತ್ ಮಟ್ಟದ ಅಧಿಕಾರಿಗಳು ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಯನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಮತದಾರರ ಪಟ್ಟಿಯಿಂದ ಅರ್ಹ ಮತದಾರರು ಹೊರಗುಳಿಯದಂತೆ ಹೆಚ್ಚಿನ ನಿಗಾ ವಹಿಸಬೇಕು. ಏನ್ಯೂಮರೇಷನ್ ಫಾರ್ಮ್ ಭರ್ತಿ ಮಾಡಿ ನೀಡದೆ ಇರುವವರು ಅಥವಾ ಫಾರಂ ಅಪ್ಲೋಡ್ ಆಗದೆ ಇರುವವರ ಹೆಸರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗುವ ಸಾಧ್ಯಗಳಿದ್ದು, ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.

ವಷರ್ದಲ್ಲಿ ನಾಲ್ಕು ಬಾರಿ ಜನವರಿ, ಎಪ್ರಿಲ್, ಜುಲೈ ಮತ್ತು ಅಕ್ಟೋಬರ್ 1ರಂದು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯಲಿದೆ. ಈ ಸಂದರ್ಭದಲ್ಲಿ 18 ವರ್ಷ ಪೂರೈಸಿದವರು ಹೊಸ ಅರ್ಜಿ ಸಲ್ಲಿಸಬಹುದು. ಪ್ರಸ್ತುತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಾಗಿ ಹೊಸ ಮತದಾರರ ಪಟ್ಟಿ ತಯಾರಿಸಲಾಗುತ್ತದೆ ಎಂದರು.

ಉಪನ್ಯಾಸಕರು ಆಗಿರುವ ಜಿಲ್ಲಾ ಮಾಸ್ಟರ್ ಟ್ರೈನರ್ ಗಂಗಾಧರ್ ಎಸ್‌ಐಆರ್ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಜೂನ್ 20ರಿಂದ 29ವರೆಗೆ ಪೂರ್ವಸಿದ್ಧತಾ ಕಾರ್ಯಗಳು ಮತ್ತು ತರಬೇತಿ ಪ್ರಕ್ರಿಯೆಗಳು ನಡೆಯಲಿವೆ. ಜೂನ್ 30ರಿಂದ ಜುಲೈ 29ರವರೆಗೆ ಬಿಎಲ್‌ಒಗಳ ಮೂಲಕ ಮನೆ ಮನೆ ಸಮೀಕ್ಷೆ ನಡೆಸಿ, ನಮೂನೆಗಳನ್ನು ಪಡೆದು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಜುಲೈ 29ರಂದು ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ (ರ್ಯಾಷನಲೈಜೆಷನ್) ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾ ಗುತ್ತದೆ. ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಅಕ್ಟೋಬರ್ 3ರವರೆಗೆ ಸ್ವೀಕೃತವಾದ ಎಲ್ಲಾ ಆಕ್ಷೇಪಣೆಗಳ ಇತ್ಯರ್ಥಗೊಳಿಸಬೇಕು, ಅಕ್ಟೋಬರ್ 7ಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಣೆ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಬಿ.ಎಲ್.ಎ ಗಳು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಪ್ರಕ್ರಿಯೆ ಕುರಿತಂತೆ ತಮ್ಮ ಸಂದೇಹಗಳನ್ನು ಪ್ರಶ್ನಿಸಿ, ಉತ್ತರ ಪಡೆದುಕೊಂಡರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಕಮಿಷನರ್ ರಶ್ಮಿ, ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಶಿಕ್ಷಣ ಇಲಾಖೆಯ ಸಂತೋಷ್‌ಕುಮಾರ್, ಸದಾನಂದ್, ಬಿಎಲ್‌ಓ, ಬಿಎಲ್‌ಎಗಳು ಹಾಗೂ ಇತರರು ಉಪಸ್ಥಿತರಿದ್ದರು.



 



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News