×
Ad

ಪಿಡಿಒಗಳು ನಿರ್ವಹಣಾ ಕೌಶಲ್ಯ ಹೆಚ್ಚಿಸಿಕೊಳ್ಳಿ: ಪ್ರತೀಕ್ ಬಾಯಲ್

Update: 2026-06-24 21:31 IST

ಉಡುಪಿ, ಜೂ.24: ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆ ಅತ್ಯಂತ ಸವಾಲಿನ ಕಾರ್ಯನಿರ್ವಹಣಾ ಶೈಲಿಯನ್ನು ಹೊಂದಿದ್ದು, ಹೆಚ್ಚಿನ ಒತ್ತಡವನ್ನು ಹೊಂದಿರುವುದರಿಂದ ನಿರ್ವಹಣಾ ಕೌಶಲ್ಯವನ್ನು ಬೆಳೆಸಿಕೊಳ್ಳುವು ದರೊಂದಿಗೆ ಸಂಘಟಿತವಾಗಿ ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಕರೆ ನೀಡಿದ್ದಾರೆ.

ಮಣಿಪಾಲದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಶಕ್ತಿಯುತ ಸಂಘಟನೆಯನ್ನು ಹೊಂದಿದ್ದಲ್ಲಿ ಕಾರ್ಯನಿರ್ವಹಣೆ ಸುಲಭ ವಾಗಿರುತ್ತದೆ. ನಾಗರಿಕರ ನಾಡಿಮಿಡಿತವನ್ನು ಅರಿತು ಅವರ ಅಶೋತ್ತರಗಳಿಗೆ ಸ್ಪಂದಿಸುವ ಹೊಣೆಗಾರಿಕೆಯೂ ನಮ್ಮ ಮೇಲಿದೆ. ಕೌಟುಂಬಿಕ ಸಮಯಕ್ಕೂ ಒತ್ತು ನೀಡುವಂತೆ ತಿಳಿಹೇಳಿದ ಬಾಯಲ್, ಉಡುಪಿ ಜಿಲ್ಲೆಯ ಪಂಚಾಯತ್ ಗಳು ರಾಷ್ಟ್ರಮಟ್ಟದ ಪುರಸ್ಕಾರ ಪಡೆಯುವ ನಿಟ್ಟಿನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಅಭಿನಂದನೀಯ ಎಂದು ಪ್ರಶಂಶಿಸಿದರು.

ಉಡುಪಿ ಜಿಲ್ಲೆಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ್ ಶೆಟ್ಟಿ ಅಂಪಾರು ಮಾತನಾಡಿ, ಗ್ರಾಮೀಣ ಪ್ರದೇಶ ಗಳ ಅಭಿವೃದ್ಧಿಯಲ್ಲಿ ಪಿಡಿಒ ಗಳ ಪಾತ್ರ ಬಹುಮುಖ್ಯವಾಗಿದ್ದು, ಉಡುಪಿ ಜಿಲ್ಲೆಯ ಪಂಚಾಯತ್ ರಾಜ್ ವ್ಯವಸ್ಥೆ ಕೇಂದ್ರ ಸರ್ಕಾರದ ಪುರಸ್ಕಾರ ಪಡೆದಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.

ಉದ್ಯಮಿ ಸಂಪತ್ ಕುಮಾರ್ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕ್ರಿಯಾಶೀಲ ರಾಗಿದ್ದು, ಹೊಸತನದ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನ ಮಾಡುತ್ತಿರುವುದು ಸಂತೋಷದ ವಿಷಯ ಎಂದರು.

ಪಿಡಿಓ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದಯಾನಂದ ಬೆನ್ನೂರು ಮಾತನಾಡಿ, ಸ್ವಚ್ಛತೆ, ಯೋಜನಾ ಅನುಷ್ಠಾನ, ಮೂಲಸೌಕರ್ಯ ಸುಧಾರಣೆಯಂತಹ ಕಾರ್ಯಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಒಗಳು ನಿರಂತರವಾಗಿ ಒತ್ತಡ ದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯ ರಕ್ಷಣೆ ಹಾಗೂ ಒತ್ತಡ ನಿರ್ವಹಣಾ ಕಾರ್ಯಗಾರದಂತಹ ಚಟುವಟಿಕೆ ಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್, ನಿವೃತ್ತಿ ಹೊಂದಿದ ತಾಪಂ ಅಧಿಕಾರಿ ಇಬ್ರಾಂಪುರ, ನಿಕಟ ಪೂರ್ವ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಹಾಗೂ ನಿಕಟಪೂರ್ವ ರಾಜ್ಯ ಪರಿಷತ್ ಸದಸ್ಯ ಸಿದ್ದೇಶ್ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತರಾದ ಹಾಗೂ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಹೊಂದಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಮಕ್ಕಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾರ್ಕೆಟಿಂಗ್ ಮ್ಯಾನೇಜರ್ ಮೋಹನ್ ಶೆಟ್ಟಿ, ಉದ್ಯಮಿ ಅಕ್ಷತ್‌ರಾಜ್, ಸಂಘದ ಜಿಲ್ಲಾ ಪದಾಧಿಕಾರಿ ಗಳು, ತಾಲೂಕು ಅಧ್ಯಕ್ಷರು, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂತೋಷ್ ಜೋಗಿ ಪ್ರಾಸ್ತಾವಿಕ ಮಾತನಾಡಿದರೆ, ಹರೀಶ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಮಹೇಶ್ ಕೆ. ನಿರೂಪಿಸಿದರು. ಅನಂತ ಪದ್ಮನಾಭ ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News