ಜೂ.28ರಂದು ಉಡುಪಿ ಜಿಲ್ಲೆಯ 65,401 ಮಕ್ಕಳಿಗೆ ಪೋಲಿಯೊ ಲಸಿಕೆಯ ಗುರಿ: ಅಬೀದ್ ಗದ್ಯಾಳ
ಉಡುಪಿ, ಜೂ.24: ಜಿಲ್ಲೆಯಾದ್ಯಂತ ಜೂನ್ 28ರ ರವಿವಾರ ನಡೆಯ ಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಅಭಿಯಾನದಲ್ಲಿ ಜಿಲ್ಲೆಯ 0-5 ವರ್ಷದೊಳಗಿನ ಒಟ್ಟು 65,401 ಮಕ್ಕಳಿಗೆ ಲಸಿಕೆಯನ್ನು ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಹೇಳಿದ್ದಾರೆ.
ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯ ಯಾವುದೇ ಮಗು ಪೋಲಿಯೊ ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳ ಬೇಕು ಎಂದವರು ಸೂಚಿಸಿದರು.
ಜೂ.28ರಂದು ಬೆಳಗ್ಗೆ 8:00ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು ಜಿಲ್ಲೆ ಎಲ್ಲಾ 0-5 ವಷರ್ದೊಳಗಿನ ಮಕ್ಕಳಿಗೆ ಈ ಹಿಂದೆ ಲಸಿಕೆ ಹಾಕಿಸಿದ್ದರೂ ಜೂ.28ರಂದು ಪೋಲಿಯೋ ಲಸಿಕೆ ಹಾಕಿಸಬೇಕು ಎಂದರು.
ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ 0-5 ವರ್ಷ ದೊಳಗಿನ ಒಟ್ಟು 65,401 ಮಕ್ಕಳನ್ನು ಗುರುತಿಸಲಾಗಿದೆ. 19 ಟ್ರಾನ್ಸಿಟ್, 3 ಮೊಬೈಲ್ ತಂಡಗಳು ಸೇರಿದಂತೆ ಒಟ್ಟು 665 ಬೂತ್‌ಗಳು ಕಾರ್ಯ ನಿರ್ವಹಿಸಲಿವೆ. 2660 ಲಸಿಕಾ ಕಾರ್ಯಕರ್ತರು ಅಂದು ಕಾರ್ಯನಿರ್ವಹಿ ಸಲಿದ್ದು, 155 ಮಂದಿ ಮೇಲ್ವಿಚಾರಕ ರನ್ನು ಸಹ ಕಾರ್ಯಕ್ಕೆ ನೇಮಿಸಲಾಗಿದೆ ಎಂದರು.
ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು 1995ರಿಂದ ಜಾರಿಗೆ ತರಲಾಗಿದೆ. ನಮ್ಮ ದೇಶದಲ್ಲಿ ಯಾವುದೇ ಒಂದು ಪ್ರಕರಣ ಕಂಡುಬಂದಿಲ್ಲ. ಆದರೆ ನಮ್ಮ ನೆರೆಹೊರೆಯ ದೇಶಗಳಲ್ಲಿ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ನಮ್ಮಲ್ಲಿಯೂ ಸಹ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮ್ಮಿಕೊಳ್ಳಲಾ ಗುತ್ತಿದೆ ಎಂದರು.
ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳ್ಳಲು ಎಲ್ಲಾ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದ ಅವರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಸಕ್ರೀಯವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರತಿಶತಃ ನೂರರಷ್ಟು ಸಾಧನೆ ಮಾಡಬೇಕೆಂದರು.
ಪೋಲಿಯೋ ಬೂತ್‌ಗಳನ್ನು ತೆರೆಯಲು ಶಾಲಾ ಕೊಠಡಿಗಳು, ಅಂಗನವಾಡಿ ಕಟ್ಟಡಗಳು ಸೇರಿದಂತೆ ಅಗತ್ಯವಿ ರುವ ಇತರ ಸರ್ಕಾರಿ ಮತ್ತು ಅರೆ ಸರ್ಕಾರಿ ಕಟ್ಟಡಗಳ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು. ಜೂ.25ರಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ ಮುಗಿಯುವವರೆಗೂ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಮೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಪೌರಾಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ ಅಲ್ಲದೇ ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿ ಗಳು, ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.