×
Ad

ಸಿದ್ದಾಪುರ ಏತ ನೀರಾವರಿ ಯೋಜನೆ ಕಾಮಗಾರಿ ತಕ್ಷಣ ಆರಂಭಿಸಲು ಸಿಎಂಗೆ ಮನವಿ

Update: 2026-06-24 20:36 IST

ಬೈಂದೂರು, ಜೂ.24: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹತ್ವಾಕಾಂಕ್ಷೆಯ ಸಿದ್ದಾಪುರ ಏತ ನೀರಾವರಿ ಯೋಜನೆಯ ಕಾಮ ಗಾರಿಯನ್ನು ತಕ್ಷಣ ಪುನರಾರಂಭಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಸಿದ್ದಾಪುರ ಏತ ನೀರಾವರಿ ಯೋಜನೆ ಎಲ್ಲಾ ತಾಂತ್ರಿಕ ಹಾಗೂ ತಜ್ಞರ ಸಮಿತಿಗಳ ಅನುಮೋದನೆ ಪಡೆದು ಆರಂಭ ಗೊಂಡಿದ್ದು, ಯೋಜನೆ ಪೂರ್ಣಗೊಂಡಲ್ಲಿ 7 ರಿಂದ 8 ಗ್ರಾಮಗಳ ಸುಮಾರು 1,200 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ರೈತ ಸಮುದಾಯದ ಬಹುಕಾಲದ ಬೇಡಿಕೆಯಾಗಿರುವ ಈ ಯೋಜನೆಯ ಕಾಮಗಾರಿಯು ಈಗಾಗಲೇ ಶೇ.56ರಷ್ಟು ಪೂರ್ಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಆದರೆ ಕೆಲವು ತಪ್ಪು ಮಾಹಿತಿಗಳ ಆಧಾರದ ಮೇಲೆ ಯೋಜನೆಯ ಕಾಮಗಾರಿಗೆ ತಡೆ ಉಂಟಾಗಿದ್ದು, ಕಳೆದ 6 ರಿಂದ 7 ತಿಂಗಳಿನಿಂದ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ. ವಾರಾಹಿ ನದಿಯಲ್ಲಿ ಸುಮಾರು 3,000 ಕ್ಯೂಸೆಕ್ಸ್ ನೀರಿನ ಹರಿವು ಲಭ್ಯವಿದ್ದು, ಈ ಯೋಜನೆಗೆ ಅಗತ್ಯವಿರುವುದು ಕೇವಲ 66 ಕ್ಯೂಸೆಕ್ಸ್ ನೀರಷ್ಟೇ ಆಗಿದೆ. ಆದ್ದರಿಂದ ಯೋಜನೆ ಜಾರಿಯಾದರೆ ಇತರೆ ಯಾವುದೇ ನೀರಾವರಿ ಅಥವಾ ಜಲವಿದ್ಯುತ್ ಯೋಜನೆಗಳಿಗೆ ತೊಂದರೆಯಾಗುವುದಿಲ್ಲ ಎಂದು ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಈಗಾಗಲೇ 2026ರ ಜನವರಿ 22ರಂದು ರಾಜ್ಯ ಸರಕಾರಕ್ಕೆ ಪತ್ರ ಬರೆದು ಕಾಮಗಾರಿ ಮುಂದುವರಿಸಲು ವಿನಂತಿಸಲಾಗಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರಲ್ಲಿ ನಿರಾಸೆ ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ.

ಸಾವಿರಾರು ರೈತ ಕುಟುಂಬಗಳ ಹಿತದೃಷ್ಟಿಯಿಂದ ಹಾಗೂ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು ಮೂಲ ಅನುಮೋದಿತ ವಿನ್ಯಾಸದಂತೆ ಮುಂದುವರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ನಿರ್ದೇಶನ ನೀಡುವಂತೆ ಸಂಸದ ರಾಘವೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News