ಸಸಿ ನಡೆಸುವ ಬಿಡಿಎ ಯೋಜನೆಗೆ ಕಟ್ಟಡ ಕಾರ್ಮಿಕ ಮಂಡಳಿ ಹಣ ಬಳಕೆಗೆ ವಿರೋಧ: ಪ್ರತಿಭಟನೆಗೆ ನಿರ್ಧಾರ
ಉಡುಪಿ, ಜೂ.24: ಜೂನ್ 27ರಂದು ಒಂದೇ ದಿನದಲ್ಲಿ 15 ಲಕ್ಷ ಸಸಿಗಳನ್ನು ನೆಡುವ ಬೃಹತ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಕ್ಕೆ ಕಟ್ಟಡ ಕಾರ್ಮಿಕರ ಸೌಲಭ್ಯಗಳಿಗೆ ಮೀಸಲಾದ ಕಲ್ಯಾಣ ಮಂಡಳಿಯ ನಿಧಿ 10 ಕೋಟಿ ರೂ. ಬಳಕೆ ಮಾಡುವ ಕ್ರಮವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ತೀವ್ರವಾಗಿ ಖಂಡಿಸಿದೆ.
ಆದರೆ ಕಲ್ಯಾಣ ಮಂಡಳಿ 2024-25 ಮತ್ತು 2025-26ರಲ್ಲಿ ಬಡ ಕಟ್ಟಡ ಕಾರ್ಮಿಕರ ಮಕ್ಕಳು ಸಲ್ಲಿಸಿದ ವಿದ್ಯಾರ್ಥಿ ವೇತನ ಅರ್ಜಿಗಳಿಗೆ ಹಣ ಜಮೆ ಮಾಡದೇ ವಿದ್ಯಾರ್ಥಿಗಳಿಗೆ ವಂಚಿಸಿದೆ. ಕಾರ್ಮಿಕರ ಮಕ್ಕಳು ಇಂದಿಗೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಪ್ರತಿಭಾ ಪುರಸ್ಕಾರ ಅರ್ಜಿಗಳನ್ನೂ ಸ್ವೀಕರಿಸಿ ಮೋಸ ಮಾಡಲಾಗಿದೆ. ಎನ್‌ಪಿಸಿಐ ಮ್ಯಾಪಿಂಗ್ ತಾಂತ್ರಿಕ ಸಮಸ್ಯೆಯಿಂದ 2023-24 ವಿದ್ಯಾರ್ಥಿ ವೇತನವೂ ಬಹುತೇಕರಿಗೆ ಬಾಕಿ ಇರಿಸಿಕೊಂಡಿದೆ.
ಇದರ ವಿರುದ್ದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಇತರೆ ಕಟ್ಟಡ ಕಾರ್ಮಿಕ ಸಂಘಗಳು ಕಲ್ಯಾಣ ಮಂಡಳಿ ಮುಂದೆ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಸಲು ತೀರ್ಮಾನಿಸಿವೆ. ಮತ್ತು ಲೋಕಾ ಯುಕ್ತರಿಗೆ, ಕಾನೂನು ಸೇವಾ ಪ್ರಾಧಿಕಾರಕ್ಕೆ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ಗಮನಕ್ಕೂ ತರಲು ನಿರ್ಧರಿಸಿವೆ ಎಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿಯ ಸಂಚಾಲಕ ಸುರೇಶ್ ಕಲ್ಲಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.