×
Ad

ಮೊಬೈಲ್ ವ್ಯಾಮೋಹ ಬಿಟ್ಟು ಪುಸ್ತಕಗಳತ್ತ ಮುಖ ಮಾಡಿ: ಎಡಿಸಿ ಅಬೀದ್ ಗದ್ಯಾಳ್

Update: 2026-06-29 21:24 IST

ಉಡುಪಿ, ಜೂ.29: ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ಬಳಕೆ ವ್ಯಾಪಕವಾಗಿ ಬೆಳೆಯುತ್ತಿದ್ದು, ಪುಸ್ತಕ ಸಂಸತಿ ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮೊಬೈಲ್ ವ್ಯಾಮೋಹವನ್ನು ಸ್ವಲ್ಪ ಬದಿಗಿಟ್ಟು, ಪುಸ್ತಕಗಳ ಕಡೆಗೆ ಮುಖ ಮಾಡಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮನೆಯೇ ಗ್ರಂಥಾಲಯ ಕಾರ್ಯಕ್ರಮ ಪ್ರೇರಣಾದಾ ಯಕವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಮನೆಯೇ ಗ್ರಂಥಾಲಯ ಅಭಿಯಾನದ ಅಂಗವಾಗಿ 200ನೇ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸರಕಾರಿ ಕಚೇರಿಗಳಲ್ಲಿ ಇಂತಹ ಗ್ರಂಥಾಲಯ ಸ್ಥಾಪನೆಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಕಚೇರಿಗೆ ವಿವಿಧ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರಿಗೆ ಕಡ್ಡಾಯವಾಗಿ ಪುಸ್ತಕ ಓದುವಂತೆ ಪ್ರೇರೇಪಿಸ ಬೇಕು. ಪುಸ್ತಕಗಳನ್ನು ಓದುವುದರ ಮೂಲಕ ಪ್ರತಿಯೊಬ್ಬರೂ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಗಾಂಧಿ ಆಸ್ಪತ್ರೆಯ ಮುಖ್ಯಸ್ಥ ಡಾ.ಹರೀಶ್ಚಂದ್ರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಾರುತಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ ಶೆಣೈ, ಸುಹಾಸಂ ಅಧ್ಯಕ್ಷೆ ಸಂಧ್ಯಾ ಶೆಣೈ, ಕಾರ್ಯದರ್ಶಿ ಮುರಳೀಧರ್, ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿಗಳಾದ ಜನಾರ್ದನ್ ಕೊಡ ವೂರು, ರಂಜನಿ ವಸಂತ್, ಪದಾಧಿಕಾರಿಗಳಾದ ಆರ್.ವಸಂತ್, ದೀಪಾ ಚಂದ್ರಕಾಂತ್, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಚಂದ್ರಕಾಂತ್ ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿಯಾನದ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News