ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಗೆ ತಿದ್ದುಪಡಿ: ಸಿಪಿಎಂ ವಿರೋಧ
ಉಡುಪಿ, ಜು.8: ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಗೆ ಪ್ರಸ್ತಾವಿತ ತಿದ್ದುಪಡಿಯನ್ನು ಸಿಪಿಐಎಂ ಪೊಲಿಟ್ ಬ್ಯುರೊ ಬಲವಾಗಿ ವಿರೋಧಿಸಿದ್ದು, ಇದು ಅಂತ್ಯೋದಯ ಅನ್ನ ಯೋಜನೆ ಅಡಿಯಲ್ಲಿ ಅರ್ಹತೆಯ ಮಾನದಂಡಗಳನ್ನು ಕುಟುಂಬ-ಆಧಾರಿತ ವ್ಯವಸ್ಥೆಯಿಂದ ತಲಾ ವ್ಯವಸ್ಥೆಗೆ ಬದಲಾಯಿಸಲು ಪ್ರಯತ್ನಿಸುತ್ತದೆ ಎಂದು ಟೀಕಿಸಿದೆ.
ಈ ತಿದ್ದುಪಡಿಯು ರಾಜ್ಯಗಳ ಮೇಲೆ, ನಿರ್ದಿಷ್ಟವಾಗಿ ಕುಟುಂಬ ಯೋಜನೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಮತ್ತು ಅದರಿಂದಾಗಿ ಕುಟುಂಬದ ಸರಾಸರಿ ಗಾತ್ರ ಕಡಿಮೆಯಿರುವ ದಕ್ಷಿಣದ ರಾಜ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ರಾಜ್ಯಗಳು ಜನಸಂಖ್ಯೆಯ ಸ್ಥಿರೀಕರಣದಲ್ಲಿ ತಮ್ಮ ಸಾಧನೆಗಳ ಹೊರತಾ ಗಿಯೂ ಒಟ್ಟಾರೆ ಆಹಾರಧಾನ್ಯ ಹಂಚಿಕೆಯಲ್ಲಿ ಗಮನಾರ್ಹವಾದ ಕಡಿತವನ್ನು ಅನುಭವಿಸುತ್ತವೆ.
ಈ ಬಡಜನ-ವಿರೋಧಿ ತಿದ್ದುಪಡಿಯು ಕೇಂದ್ರ ಸರಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯನ್ನು ಕ್ರಮೇಣ ನಿಸ್ಸಾರಗೊಳಿಸುವ ಮತ್ತು ದುರ್ಬಲಗೊಳಿಸುವ ಪ್ರಯತ್ನದಲ್ಲಿದೆ ಎಂಬುದನ್ನು ಬಯಲಿಗೆ ತರುತ್ತದೆ. ಈ ಕಾಯಿದೆ ಆಹಾರವನ್ನು ಒಂದು ಕಾನೂನುಬದ್ಧ ಹಕ್ಕಾಗಿ ಸ್ಥಾಪಿಸಲು ಜನರು ನಡೆಸಿದ ನಿರಂತರ ಹೋರಾಟಗಳ ಪರಿಣಾಮ ವಾಗಿ ಜಾರಿಗೆ ಬಂದಿರುವ ಪ್ರಮುಖ ಶಾಸನವಾಗಿದ್ದು, ಪ್ರಸ್ತಾವಿತ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.