ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಉಳಿಸಲು ಹಸ್ತಪ್ರತಿಗಳ ಸಂರಕ್ಷಣೆ: ಉಡುಪಿ ಡಿಸಿ ಸ್ವರೂಪ ಟಿ.ಕೆ.
ಉಡುಪಿ: ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಹಸ್ತಪ್ರತಿಗಳ ಸಂರಕ್ಷಣೆ ಯಂಥ ಐತಿಹಾಸಿಕ ಮಹತ್ವದ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಕರ್ನಾಟಕ ಜ್ಞಾನ ಭಂಡಾರ ಹಸ್ತಪ್ರತಿಗಳು ಮತ್ತು ಡಿಜಿಟಲೀಕರಣ ಅಧಿನಿಯಮ 2026ರ ಬಗ್ಗೆ ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ನಮ್ಮಲ್ಲಿ ಹೇರಳವಾಗಿರುವ ಹಳೆಯ ತಾಳೆಗರಿಗಳು ಹಾಗೂ ಅಮೂಲ್ಯ ಹಸ್ತಪ್ರತಿಗಳು ನಶಿಸಿಹೋಗದಂತೆ ತಡೆ ಯಲು ‘ಜ್ಞಾನ ಭಾರತಂ ಮಿಷನ್’ ಯೋಜನೆಯಡಿಯಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಅವುಗಳ ಡಿಜಿಟಲ್ ರೂಪಾಂತರ ಮಾಡಲಾಗುತ್ತಿದ್ದು, ಈ ಕಾರ್ಯಕ್ಕೆ ಜಿಲ್ಲೆಯ ಜನತೆ ಅಗತ್ಯ ಸಹಕಾರ ನೀಡಬೇಕು ಎಂದು ಸ್ವರೂಪ ಟಿ. ಕೆ ಕರೆ ನೀಡಿದರು.
‘ಜ್ಞಾನ ಭಾರತಂ ಮಿಷನ್’ ಯೋಜನೆಯಡಿಯಲ್ಲಿ ರಾಜ್ಯದಾದ್ಯಂತ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆ ಹಾಗೂ ಡಿಜಿಟಲೀಕರಣ ಕಾರ್ಯ ಈಗಾಗಲೇ ಆರಂಭವಾಗಿದೆ. ದೇಶದಾದ್ಯಂತ ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 4 ಲಕ್ಷಕ್ಕೂ ಹೆಚ್ಚು ಹಸ್ತಪ್ರತಿಗಳು ಡಿಜಿಟಲೀಕರಣ ಗೊಂಡಿದ್ದು, ಜಿಲ್ಲೆಯಲ್ಲಿ 4756 ಹಸ್ತಪ್ರತಿಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದವರು ವಿವರಿಸಿದರು.
ಜನಸಾಮಾನ್ಯರು ತಮ್ಮ ಬಳಿ ಇರುವ ಹಸ್ತಪ್ರತಿಗಳ ಮಾಹಿತಿಯನ್ನು ನೀಡಿ, ಸಂರಕ್ಷಣಾ ಕಾರ್ಯದಲ್ಲಿ ಭಾಗವಹಿಸು ವಂತೆ ತಿಳಿಸಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿರುವ ವಿಶ್ವವಿದ್ಯಾಲಯಗಳು, ಮಠಗಳು, ಶಿಲ್ಪಿಗಳು, ಜೋತಿಷ್ಯರು, ಅರ್ಚಕರ ಮನೆಗಳು, ಬ್ರಾಹ್ಮಣರು, ಸಾಂಸ್ಥಿಕ ಭಂಡಾರಗಳು, ದೇವಾಲಯ ಗಳು, ಗ್ರಂಥಾಲಯಗಳು, ಆಶ್ರಮ ಗಳು, ಜೈನ ಬಸದಿ, ಆಯುರ್ವೇದ ಪಂಡಿತರು, ಖಾಸಗಿ ವ್ಯಕ್ತಿಗಳ ಸಂಗ್ರಹದಲ್ಲಿ ಹಳೆಯ ಕೈಬರಹ, ಹಸ್ತಪ್ರತಿ ದಾಖಲೆಗಳು ಲಭ್ಯವಿದ್ದಲ್ಲಿ ನೇರವಾಗಿ ಜ್ಞಾನ ಭಾರತಂ ಆ್ಯಪ್ ಮೂಲಕ ಅಪ್ಲೋಡ್ ಮಾಡಬಹುದು ಅಥವಾ ಮಾಹಿತಿ ನೀಡಿದ್ದಲ್ಲಿ ಸಮೀಕ್ಷೆದಾರರೇ ತಮ್ಮಲ್ಲಿಗೆ ಬಂದು ದಾಖಲಿಸಿಕೊಳ್ಳಲಿದ್ದಾರೆ ಎಂದು ಅವರು ತಿಳಇಸಿದರು.
ಡಿಜಿಟಲೀಕರಣಗೊಳಿಸಿದ ನಂತರ ತಮ್ಮ ಮೂಲ ಹಸ್ತಪ್ರತಿಗಳಿಗೆ ಹಾನಿಯಾಗದಂತೆ ಸುರಕ್ಷಿತವಾಗಿ ವಾಪಸು ನೀಡಲಾಗುವುದು. ತಾಳೆಗರಿ ಹಾಗೂ ಹಳೆಯ ಹಸ್ತಪ್ರತಿಗಳು, ಇತರೆ ರೂಪಗಳಲ್ಲಿ ಬರೆಯಲ್ಪಟ್ಟ ಪ್ರಾಚೀನ ವಿಜ್ಞಾನ, ಸಾಹಿತ್ಯ, ವೈದ್ಯಕೀಯ ಹಾಗೂ ಧಾರ್ಮಿಕ ಜ್ಞಾನಗಳನ್ನು ಒಳಗೊಂಡಿದೆ. ಇವುಗಳ ಸಂರಕ್ಷಣೆ ಪ್ರತಿಯೊ ಬ್ಬರ ಜವಾಬ್ದಾರಿಯಾಗಿದೆ ಎಂದ ಅವರು, ಡಿಜಿಟಲೀಕರಣಗೊಂಡ ಹಸ್ತಪ್ರತಿಗಳು ಭವಿಷ್ಯದಲ್ಲಿ ಸಂಶೋಧಕರಿಗೆ ಸಂಶೋಧನೆ ಮಾಡಲು ಅನುಕೂಲವಾಗಲಿದೆ ಎಂದರು.
ಹಸ್ತಪ್ರತಿಗಳಲ್ಲಿರುವ ಭಾಷಾಲಿಪಿ, ಶೈಲಿ, ಔಷಧೀಯ ವಿವರ, ವಿಗ್ರಹ ಗಳನ್ನು ಕೆತ್ತಲು ಅಳತೆ ಮಾಡುವ ವಿಧಾನ, ಪೂರ್ವಜರ ಆಚಾರ- ವಿಚಾರಗಳು, ಕಲಾ ಕೈಚಳಕಗಳು ಸೇರಿದಂತೆ ಅವರಲ್ಲಿದ್ದ ಜ್ಞಾನವನ್ನು ತಿಳಿಯಲು, ಅದನ್ನು ಮುಂದುವರೆಸಿಕೊಂಡು ಹೋಗಲು ಹಸ್ತಪ್ರತಿಗಳು ಸಹಕಾರಿಯಾಗಲಿವೆ ಎಂದರು.
ಸಭೆಯಲ್ಲಿ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂದ್ಯಾ ಎನ್.ಎಂ., ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಧನಲಕ್ಷ್ಮೀ, ಜಿಲ್ಲಾ ವಿಶ್ವಕರ್ಮ ಕಾರ್ಪೆಂಟರ್ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಆಚಾರ್ಯ, ಆಯುಷ್ ಫೆಡರೇಷನ್ ಆಫ್ ಇಂಡಿಯಾ ಜಿಲ್ಲಾ ಅಧ್ಯಕ್ಷ ಡಾ. ಟಿ.ಎನ್ ಅಂಚನ್, ಸಾಲಿಗ್ರಾಮ ವಲಯ ಬ್ರಾಹ್ಮಣರ ಸಂಘದ ಅಧ್ಯಕ್ಷ ಪಟ್ಟಾಭಿ ಸೋಮಯಾಜಿ ಮತ್ತಿತರರು ಉಪಸ್ಥಿತರಿದ್ದರು.