×
Ad

ನಿಟ್ಟೆಯಲ್ಲಿ ಹವಾಮಾನ, ವಾಯು ಗುಣಮಟ್ಟ ನಿರೀಕ್ಷಣಾ ಕೇಂದ್ರ ಉದ್ಘಾಟನೆ

Update: 2026-07-08 21:31 IST

ನಿಟ್ಟೆ, ಜು.8: ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿರುವ ಅತ್ಯಾಧುನಿಕ ಹವಾಮಾನ ಮತ್ತು ವಾಯು ಗುಣಮಟ್ಟ ಮೊನಿಟರಿಂಗ್ (ನಿರೀಕ್ಷಣಾ) ಕೇಂದ್ರವನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ಉದ್ಘಾಟಿಸಲಾಯಿತು.

ಕೇಂದ್ರವನ್ನು ಹಿರಿಯ ಉದ್ಯಮಿ, ಐಟಿ ತಜ್ಞ ರೋಹಿತ್ ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಂಗಳೂರಿನ ಟಿಐಇಯ ಕಾರ್ಯ ನಿರ್ವಾಹಕ ನಿರ್ದೇಶಕ ಅತುಲ್ ಉಡುಪಿ, ಜನರಲ್ ಇಲೆಕ್ಟ್ರಿಕ್ ಹೆಲ್ಕ್‌ಕೇರ್ ಸಾಫ್ಟ್‌ವೇರ್ ಡೆವಲಪರ್ ಸಿದ್ಧಾರ್ಥ್ ಪೈ, ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾದ ಡಾ. ನಿರಂಜನ್ ಎನ್. ಚಿಪ್ಳುಣ್ಕರ್ ಹಾಗೂ ಇತರರು ಉಪಸ್ಥಿತರಿದ್ದರು.

ಈ ಹವಾಮಾನ ಕೇಂದ್ರವು ತಾಪಮಾನ, ಸಾಪೇಕ್ಷ ಆರ್ದ್ರತೆ, ಮಳೆಯ ಪ್ರಮಾಣ, ಗಾಳಿಯ ವೇಗ, ಗಾಳಿಯ ದಿಕ್ಕು, ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ), ಗಾಳಿಯಲ್ಲಿರುವ ಕಾರ್ಬನ್ ಮಾನಾಕ್ಸೈಡ್ (ಸಿಒ), ಓಝೋನ್ (ಓ) ಹಾಗೂ ಸೂಕ್ಷ್ಮ ಕಣಗಳು ಸೇರಿದಂತೆ ಪ್ರಮುಖ ಹವಾಮಾನ ಮತ್ತು ಪರಿಸರದ ಅಂಶಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ ದಾಖಲಿಸುತ್ತದೆ.

ಸಂಗ್ರಹವಾಗುವ ಮಾಹಿತಿಯನ್ನು ಸುರಕ್ಷಿತ ಕ್ಲೌಡ್ ಪ್ಲಾಟ್‌ಫಾರ್ಮ್‌ಗೆ ರವಾನಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿರುವ ವೆಬ್ ಡ್ಯಾಶ್ ಬೋರ್ಡ್ ಮೂಲಕ ಅದನ್ನು ಪ್ರದರ್ಶಿಸಲಾಗುತ್ತದೆ. ಇದರಿಂದ ಇಂಟರ್ನೆಟ್ ಸಂಪರ್ಕವಿರುವ ಯಾವುದೇ ಸಾಧನದ ಮೂಲಕ ನಿಟ್ಟೆ ಪ್ರದೇಶದ ರಿಯಲ್-ಟೈಮ್ ಹವಾಮಾನ ಹಾಗೂ ವಾಯು ಗುಣಮಟ್ಟದ ಮಾಹಿತಿಯನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ.

ಕರಾವಳಿ ಭಾಗದಲ್ಲಿ ಸಂವೇದಕ (ಸೆನ್ಸರ್) ಆಧಾರಿತ ತಂತ್ರಜ್ಞಾನದ ಮೂಲಕ ವಿವಿಧ ಪರಿಸರ ಮಾನದಂಡಗಳನ್ನು ಒಂದೇ ಆನ್‌ಲೈನ್ ವೇದಿಕೆ ಯಲ್ಲಿ ಸಾರ್ವಜನಿಕರಿಗೆ ರಿಯಲ್-ಟೈಮ್‌ನಲ್ಲಿ ಒದಗಿಸುವ ಪ್ರಥಮ ಸಾರ್ವಜನಿಕ ಹವಾಮಾನ ಮತ್ತು ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರ ಎಂಬ ಹೆಗ್ಗಳಿಕೆಗೆ ಈ ಯೋಜನೆ ಪಾತ್ರವಾಗಿದೆ.

ಈ ಯೋಜನೆಯನ್ನು ಎನ್‌ಎಂಎಎಂಐಟಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಡಾ. ಸುಕೇಶ್ ರಾವ್ ಎಂ ಅವರ ಮಾರ್ಗದರ್ಶನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಹಾಗೂ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ ವಿದ್ಯಾರ್ಥಿಗಳು ಜಂಟಿಯಾಗಿ ಅಭಿವೃದ್ಧಿ ಪಡಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.



 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News