ಕುಂದಾಪುರ|ಮಲಗಿದ್ದ ವ್ಯಕ್ತಿಯ ಕೊಲೆ ಪ್ರಕರಣ: ಆರೋಪಿ ರಾಜುಗೆ ಜೀವಾವಧಿ ಶಿಕ್ಷೆ

Update: 2026-07-29 21:38 IST

ರಾಜು

ಕುಂದಾಪುರ, ಜು.29: ಮೂರು ವರ್ಷಗಳ ಹಿಂದೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹರ್ಕೂರು ಎಂಬಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ ಪ್ರಕರಣದ ಆರೋಪಿಗೆ ಕುಂದಾಪುರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಜು.29ರಂದು ಆದೇಶ ನೀಡಿದೆ.

ರಾಜು ಶಿಕ್ಷೆಗೆ ಗುರಿಯಾದ ಆರೋಪಿ. 2023ರ ಮೇ 14ರಂದು ಕುಂದಾಪುರ ತಾಲೂಕು ಹರ್ಕೂರು ಗ್ರಾಮದ ನಾಗರಾಜ ಆಚಾರಿ ಗಾರೆ ಕೆಲಸಕ್ಕಾಗಿ ಸಂಗೋದಪ್ಪ ಯಾನೆ ಸಂಗಮೇಶ ಎಂಬ ಮೇಸ್ತ್ರಿಯ ಮೂಲಕ ರಾಜು ಅವರನ್ನು ಕರೆದುಕೊಂಡು ಹೋಗಿದ್ದರು. ರಾತ್ರಿ 9:15 ಗಂಟೆಗೆ ಸಂಗೊದೆಪ್ಪ ಹಾಗೂ ರಾಜು ಸಂಬಳದ ವಿಚಾರ ವಾಗಿ ಗಲಾಟೆ ಮಾಡಿ ಹೊಡೆದಾಡಿಕೊಂಡಿದ್ದು, ಅದರಲ್ಲಿ ರಾಜು ಎಂಬಾತನು ಪಂಚಾಂಗದ ಬಳಿಯಲ್ಲೇ ಇದ್ದ ಕೆಂಪು ಕಲ್ಲನ್ನು ಎತ್ತಿ ಸಂಗೋದಪ್ಪ ಅವರ ತಲೆಯ ಮೇಲೆ ಹಾಕಿ ಕೊಲೆ ಮಾಡಿರುವುದಾಗಿ ದೂರಲಾಗಿತ್ತು.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ಸಾಕ್ಷಿ ವಿಚಾರಣೆಯನ್ನು ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಇಂದಿರಾ ನಾಯ್ಕ ಸಾಕ್ಷಿವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ ಶೇಖ್ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು, ಆತನಿಗೆ ಕಲಂ: 302 ಐಪಿಸಿಯಡಿ ಜೀವಾವಧಿ ಶಿಕ್ಷೆ ಮತ್ತು 5000 ರೂ. ದಂಡ, ಕಲಂ 504 ಐಪಿಸಿಯಡಿ ಒಂದು ವರ್ಷ ಜೈಲು ಶಿಕ್ಷೆ, 5000ರೂ. ದಂಡ, ಕಲಂ 506 ಐಪಿಸಿರಡಿ 1 ವರ್ಷ ಸಜೆ, 5000ರೂ. ದಂಡ ಹಾಗೂ ಕಲಂ 324 ಐಪಿಸಿ ರಡಿ 1 ವರ್ಷ ಸಜೆ ರೂ 5000 ದಂಡವನ್ನು ವಿಧಿಸಿ ಆದೇಶ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News