ಹಂದಿಗಳ ಸಾವಿಗೆ ‘ಆಫ್ರಿಕನ್ ಸ್ವೈನ್ ಫೀವರ್’ ವೈರಸ್ ಕಾರಣ; ಆತಂಕ ಬೇಡ, ಜಾಗೃತೆ ಇರಲಿ: ಅಧಿಕಾರಿಗಳ ಸಲಹೆ

*ಇಲಾಖೆಗಳ ಸಮನ್ವಯತೆಯಲ್ಲಿ ಕಟ್ಟೆಚ್ಚರ *‘ಆಫ್ರಿಕನ್ ಹಂದಿಜ್ವರ’ ಮನುಷ್ಯರಿಗೆ,ಇತರೆಪ್ರಾಣಿಗಳಿಗೆ ಹರಡೋದಿಲ್ಲ

Update: 2026-08-07 21:43 IST

ಕುಂದಾಪುರ, ಆ.7: ಕುಂದಾಪುರ, ಬೈಂದೂರು ಭಾಗದ ಕಾಡಂಚಿನ ಗ್ರಾಮಗಳಲ್ಲಿ ಕಾಡು ಹಂದಿಗಳು ಮತ್ತು ಸೇನಾಪುರದಲ್ಲಿ ಫಾರ್ಮ್‌ನಲ್ಲಿ ಸಾಕು ಹಂದಿಗಳು ಸರಣಿಯಾಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಬೆಂಗಳೂರಿನ ಬೆಂಗಳೂರಿನ ಭಾರತೀಯ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ (ಪ್ರಯೋಗಾಲಯ)ಕ್ಕೆ ಪರೀಕ್ಷೆಗಾಗಿ ಕಳುಹಿಸಿದ ಮೃತ ಹಂದಿಗಳ ದೇಹದ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, ಹಂದಿಗಳ ಸಾವಿಗೆ ಆಫ್ರಿಕನ್ ಸ್ಟೈನ್ ಫೀವರ್ (ಆಫ್ರಿಕನ್ ಹಂದಿ ಜ್ವರ) ವೈರಾಣು ಕಾರಣ ಎಂಬುದು ದೃಢಪಟ್ಟಿದೆ.

ಆದರೆ ಇದು ಮನುಷ್ಯರಿಗೆ ಹಾಗೂ ಇತರೆ ಪ್ರಾಣಿಗಳಿಗೆ ಹರಡುವುದಿಲ್ಲ ಎಂದು ಉಡುಪಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ರೆಡ್ಡಪ್ಪ ಸ್ಪಷ್ಟಪಡಿಸಿದ್ದಾರೆ.

ಕುಂದಾಪುರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಪಶುಪಾಲನಾ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಅವರು ಮಾಹಿತಿ ನೀಡಿ ಮಾತನಾಡಿದರು.

ಹಂದಿಗಳಲ್ಲಿ ಕಾಣಿಸಿಕೊಂಡು ಅವುಗಳ ಸಾವಿಗೆ ಕಾರಣವಾಗುವ ಆಫ್ರಿಕನ್ ಸ್ವೈನ್ ಫೀವರ್‌ಗೆ ಯಾವುದೇ ಚಿಕಿತ್ಸೆ ಅಥವಾ ಲಸಿಕೆ ಇಲ್ಲ. ಇದು ವೈರಸ್ ನಿಂದ ಬರುವ ಕಾಯಿಲೆಯಾಗಿದ್ದು, ಒಮ್ಮೆ ಈ ಜ್ವರ ಕಾಣಿಸಿಕೊಂಡರೆ ಹಂದಿ ಸಾಯುವುದು ಖಚಿತ ಎಂದವರು ತಿಳಿಸಿದರು.

ರೋಗಪೀಡಿತ ವಲಯ: ಮುಂಜಾಗ್ರತಾ ಕ್ರಮವಾಗಿ ರೋಗ ಕಂಡು ಬಂದ ಪ್ರದೇಶದ ಸುತ್ತಮುತ್ತಲಿನ ಒಂದು ಕಿ.ಮೀ ವ್ಯಾಪ್ತಿಯನ್ನು ರೋಗಪೀಡಿತ ವಲಯ ಮತ್ತು 10 ಕಿ.ಮೀ. ವ್ಯಾಪ್ತಿಯನ್ನು ಸರ್ವೇಕ್ಷಣಾ ವಲಯ ಎಂದು ಘೋಷಣೆ ಮಾಡಲಾಗಿದೆ. ಬೇರೆ ಬೇರೆ ಇಲಾಖೆಗಳ ಸಮನ್ವಯದೊಂದಿಗೆ ರೋಗ ತಡೆಗಟ್ಟಲು ಕ್ರಮಕೈಗೊಳ್ಳ ಲಾಗಿದೆ. ರೋಗ ಬರದೇ ಇರುವ ರಿತಿಯಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ಕಾಯಿಲೆ ಇಲ್ಲದಿದ್ದರೆ ರೋಗರಹಿತ ವಲಯ ಎಂದು ಘೋಷಣೆ ಮಾಡಲಾಗುವುದು ಎಂದರು.

ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಾದೇಶಿಕ ಸಂಶೋಧನಾ ಅಧಿಕಾರಿ ಡಾ. ವಸಂತಕುಮಾರ್ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳ್ಳೆಯಲ್ಲಿ 4 ವರ್ಷದ ಹಿಂದೆ ಹಂದಿ ಫಾರ್ಮ್ ಒಂದರಲ್ಲಿ ಈ ರೋಗ ಕಂಡು ಬಂದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ, ಮೂಡಬಿದಿರೆ ಮತ್ತು ನೀರುಮಾರ್ಗದಲ್ಲಿ ಇಂತಹ ಪ್ರಕರಣ ವರದಿ ಯಾಗಿದ್ದು, ಬಳಿಕ ಅಲ್ಲಿ ಕೆಲವೊಂದು ಮುನ್ನೆಚ್ಚರಿಕೆ ಕ್ರಮಕೈಗೊಂಡು, ರೋಗವನ್ನು ನಿಯಂತ್ರಣಕ್ಕೆ ತರಲಾಗಿತ್ತು ಎಂದರು.

ಆ ಬಳಿಕ ಯಾವುದೇ ಹೊಸ ಪ್ರಕರಣಗಳು ಕಂಡು ಬಂದಿರಲಿಲ್ಲ. ಕಾಡಿನಲ್ಲಿ ಬೆಳಕಿಗೆ ಬಂದ ಪ್ರಥಮ ಪ್ರಕರಣ ಇದಾಗಿದೆ. ಕಾಡಿನಲ್ಲಿ ಹಂದಿ ಸತ್ತರೆ ಅಥವಾ ರೋಗಗ್ರಸ್ತವಾಗಿ ಓಡಾಡುತ್ತಿದ್ದರೆ ಇದರ ಬಗ್ಗೆ ತಕ್ಷಣ ಮಾಹಿತಿ ನೀಡಿದರೆ ರೋಗವನ್ನು ನಿಯಂತ್ರಣಕ್ಕೆ ತರಲು ಸುಲಭವಾಗುತ್ತದೆ. ಎಲ್ಲವೂ ವಿಳಂಬವಾಗುತ್ತಾ ಹೋದರೆ ಒಂದು ಹಂದಿಯಿಂದ ಇನ್ನಷ್ಟು ಹಂದಿಗಳಿಗೆ ಹರಡುವ ಸಾಧ್ಯತೆ ಇರುತ್ತದೆ. ಮೀಸಲು ಅರಣ್ಯದಲ್ಲಿ ಕಾಡು ಹಂದಿಗಳ ಸಾವನ್ನು ನಿಯಂತ್ರಣಕ್ಕೆ ತರುವುದು ಸವಾಲಿನ ಕೆಲಸವಾಗಿದ್ದು, ಈ ಬಗ್ಗೆ ಸ್ಥಳೀಯಾಡಳಿತ, ಅರಣ್ಯ, ಆರೋಗ್ಯ ಇಲಾಖೆಗಳಿಗೆ ಮಾಹಿತಿ ಇರಬೇಕು ಎಂದು ಡಾ.ವಸಂತ ಕುಮಾರ್ ಹೇಳಿದರು.

ಕುಂದಾಪುರ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಅರುಣ್ ಹೆಗ್ಡೆ ಮಾತನಾಡಿ, ಹಂದಿಗಳಿಗೆ ಕಾಣಿಸಿಕೊಂಡಿರುವ ರೋಗವನ್ನು ನಿಯಂತ್ರಿಸಲು ಆರೋಗ್ಯ, ಪಂಚಾಯತ್‌ರಾಜ್, ಅರಣ್ಯ ಇಲಾಖೆ ಮತ್ತು ಪಶುಪಾಲನಾ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದ್ದು, ವಿವಿಧ ಇಲಾಖೆಗಳು ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿ ಇಲಾಖೆಗಳ ಸಹಕಾರ ಕೋರಿದರು.

ಕುಂದಾಪುರ ತಾಪಂ. ಕಾರ್ಯನಿರ್ವಹಣಾಧಿಕಾರಿ ಮಹೇಶ ಕೆ.ಜಿ. ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ವಲಯ ಅರಣ್ಯ ಉಪಸಂರಕ್ಷಣಾಧಿಕಾರಿ ಸಂದೇಶ, ಆರೋಗ್ಯ, ಪಂಚಾಯತ್‌ರಾಜ್, ಅರಣ್ಯ ಇಲಾಖೆ ಮತ್ತು ಪಶುಪಾಲನಾ ಇಲಾಖೆ ಅಧಿಕಾರಿಗಳು, ಪಿಡಿಒ ಮೊದಲಾದವರು ಉಪಸ್ಥಿತರಿದ್ದರು.

‘ಸೇನಾಪುರ ಗ್ರಾಮದ ಒಂದು ಕಿ.ಮೀ ವ್ಯಾಪ್ತಿಯನ್ನು ರೋಗಪೀಡಿತ ವಲಯ ಮತ್ತು 10 ಕಿ.ಮೀ. ವ್ಯಾಪ್ತಿಯನ್ನು ಸರ್ವೇಕ್ಷಣಾ ವಲಯ ಎಂದು ಘೋಷಣೆ ಮಾಡಲಾಗಿದೆ. ರೋಗಪೀಡಿತ ಪ್ರದೇಶದಲ್ಲಿರುವ ಹಂದಿಗಳನ್ನು ಮಾನವೀಯವಾಗಿ ಕೊಲ್ಲಲಾಗುವುದು ಮತ್ತು ಅನುಮೋದಿತ ವಿಧಾನದಲ್ಲಿ ಸುರಕ್ಷಿತ ವಿಲೇವಾರಿ ಮಾಡಲಾಗುವುದು. ಸ್ಟ್ಯಾಂಪ್ ಮಾಡುವ ಹಂದಿಗಳಿಗೆ ಸರಕಾರದಿಂದ ಪರಿಹಾರ ನೀಡಲಾಗುವುದು. ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಿದ್ದು ಈ ಬಗ್ಗೆ ನಿಗಾ ವಹಿಸಲಾಗಿದೆ.

-ಡಾ.ರೆಡ್ಡಪ್ಪ, ಉಡುಪಿ ಪಶುಪಾಲನಾ ಇಲಾಖೆ ಉಪನಿರ್ದೇಶಕ.

‘ಆಫ್ರಿಕನ್ ಸ್ಟೈನ್ ಫೀವರ್ ವೈರಸ್‌ನಿಂದ ಬರುವ ರೋಗ. ಇದು ಹಂದಿಗಳಿಗೆ ಮಾತ್ರ ಬರುತ್ತದೆ. ವಿವಿಧ ಇಲಾಖೆ ಗಳ ಸಮನ್ವಯತೆ ಸಾಧಿಸಿ ಸತ್ತ ಹಂದಿಗಳ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಿ ದಾಗ ಆಫ್ರಿಕನ್ ಸ್ವೈನ್ ಫೀವರ್ ಎಂಬುದು ದೃಢಪಟ್ಟಿದೆ. ಮಾರ್ಗಸೂಚಿ ಪ್ರಕಾರ ಜಿಲ್ಲಾಡಳಿತ ಹಾಗೂ ಇನ್ನಿತರ ಇಲಾಖೆಗಳು ಮುಂದಿನ ಮೂರು ತಿಂಗಳು ರೋಗವನ್ನು ನಿಯಂತ್ರಣಕ್ಕೆ ತರಲು ಮತ್ತು ರೋಗ ರಹಿತ ವಲಯ ವನ್ನಾಗಿ ಮಾಡಲು ಕ್ರಮಕೈಗೊಳ್ಳಲಾಗಿದೆ. ರೋಗ ಉಲ್ಭಣವಾಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ.

-ಡಾ.ವಸಂತಕುಮಾರ್ ಶೆಟ್ಟಿ, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಮಂಗಳೂರಿನ ಪ್ರಾದೇಶಿಕ ಸಂಶೋಧನಾ ಅಧಿಕಾರಿ.

‘ಆಫ್ರಿಕನ್ ಸ್ವೈನ್ ಫೀವರ್ ಮನುಷ್ಯರಿಗೆ ಹರಡುವುದಿಲ್ಲ. ಹಂದಿಗಳಿಂದ ಹಂದಿಗಳಿಗೆ ಹರಡಿ ಸಾವುಂಟು ಮಾಡುತ್ತದೆ. ಪ್ರಾಣಿಗಳ ಕಳೇಬರ ಕಂಡಾಗ ಸ್ಥಳೀಯಾಡಳಿತ, ಆರೋಗ್ಯ, ಪಶುಸಂಗೋಪನಾ ಇಲಾಖೆ ಮತ್ತು ಅರಣ್ಯ ಇಲಾಖೆ ಮಾಹಿತಿ ನೀಡಬೇಕು. ಸತ್ತ ಪ್ರಾಣಿಗಳನ್ನು ಮುಟ್ಟಬಾರದು. ಕೈಗಳಿಗೆ ಗ್ಲೌಸ್, ದೇಹಕ್ಕೆ ಪಿಪಿಇ ಕಿಟ್ ಬಳಸಬೇಕು. ಹಂದಿಗಳು ಸಾವನ್ನಪ್ಪಿದ ಪ್ರದೇಶಗಳಲ್ಲಿ ಜ್ವರ ಸಮೀಕ್ಷೆ ಮಾಡಲಾಗಿದ್ದು, ಮಾನವ ಜೀವಕ್ಕೆ ಅಪಾಯವಿಲ್ಲ, ಆರೋಗ್ಯ ಕಾಳಜಿ ಇರಲಿ.

-ಡಾ. ಪ್ರೇಮಾನಂದ, ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News