ಹುಕ್ಕಾ ಸೇವನೆ: ಎಂಟು ಮಂದಿ ಪೊಲೀಸ್ ವಶಕ್ಕೆ
ಮಣಿಪಾಲ : ಇಲ್ಲಿನ ವಿದ್ಯಾರತ್ನ ನಗರದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿರುವ ಕಟ್ಟಡದಲ್ಲಿನ ಡ್ರಿಂಕ್ ಲ್ಯಾಬ್‌ನಲ್ಲಿ ಅಕ್ರಮವಾಗಿ ಹುಕ್ಕಾ ಸೇದುತ್ತಿದ್ದ ಎಂಟು ಮಂದಿಯನ್ನು ಮಣಿಪಾಲ ಪೊಲೀಸರು ಆ.6ರಂದು ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿಯಂತೆ ಮಣಿಪಾಲ ಎಎಸ್ಸೈ ವಾಮನ ಹಾಗೂ ಸಿಬ್ಬಂದಿ ಸುರೇಶ ಶೆಟ್ಟಿ, ಚೇತನ್ ಕುಮಾರ್, ರವಿರಾಜ್ ಹಾಗೂ ಉಮೇಶ ಕೆಫೆಗೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು, ಆಗ ಸುಮಾರು 8 ಜನ ಯುವಕರು ಹುಕ್ಕಾ ಸೇವಿಸುತ್ತಿರುವುದು ಕಂಡು ಬಂದಿದೆ.
ಕುಂದಾಪುರದ ಎಸ್.ರಿಯಾಜ್, ಬೈಂದೂರಿನ ಜೀಶಾನ್ ಅಬ್ದುಲ್ ಜಾಹೀರ್, ಗಂಗೊಳ್ಳಿಯ ಮೊಹಮ್ಮದ್ ಸಮೀರ್, ಉಡುಪಿಯ ಮಹಮ್ಮದ್ ಸವಾದ್, ಕೃಷ್ಣ, ಚಿರಾಗ್, ಅನ್ವೀತ್, ಕಾಪುವಿನ ತಾರನಾಥ್ ಮತ್ತು ಹುಕ್ಕಾ ನೀಡುತ್ತಿದ್ದ ಕೆಫೆಯ ಮೆನೇಜರ್ ಬಂಟ್ವಾಳ ಮಣ್ಣೂರು ಗ್ರಾಮದ ಮೊಹಮ್ಮದ್ ಶಫಾನ(22) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕೋಟ್ಪಾ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.