ಸಂಜೀವಿನಿ ಒಕ್ಕೂಟದ ಮುಖ್ಯ ಬರಹಗಾರ್ತಿಯಿಂದ 33.50ಲಕ್ಷ ರೂ. ವಂಚನೆ: ಪ್ರಕರಣ ದಾಖಲು

Update: 2026-08-07 21:30 IST

ಕೋಟ, ಆ.7: ಸಂಜೀವಿನಿ ಒಕ್ಕೂಟದ ಲಕ್ಷಾಂತರ ರೂ. ಹಣವನ್ನು ಮುಖ್ಯ ಬರಹಗಾರ್ತಿ ದುರುಪಯೋಗ ಪಡಿಸಿ ವಂಚಿಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಅಶ್ವಿನಿ(33) ಎಂಬಾಕೆ 2022 ರಿಂದ ಸಮೃದ್ದಿ ಸಂಜೀವಿನಿ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮುಖ್ಯ ಬರಹಗಾರರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದಾರೆ. ಈ ಒಕ್ಕೂಟ ದಲ್ಲಿ ಒಟ್ಟು 54 ಸ್ವಸಹಾಯ ಸಂಘಗಳಿದ್ದು, ಸಮೃದ್ದಿ ಸಂಜೀವಿನಿ ಒಕ್ಕೂಟಕ್ಕೆ 2022ರಿಂದ ಸರಕಾರದಿಂದ ಒಟ್ಟು 52,50,000ರೂ. ಹಣ ಬಂದಿದೆ. ಈ ಹಣದ ವ್ಯವಹಾರವು ಕೆನರಾ ಬ್ಯಾಂಕ್ ಬಿದ್ಕಲ್ಕಟ್ಟೆ ಶಾಖೆಯಲ್ಲಿ ನಡೆಯುತ್ತಿದೆ. ಈ ಹಣವನ್ನು ಒಕ್ಕೂಟದಿಂದ ಅವಶ್ಯಕತೆಯ ಮೇರೆಗೆ ಬೇರೆ ಬೇರೆ ಸ್ವಸಹಾಯ ಸಂಘಕ್ಕೆ ಹಂಚಿಕೆ ಮಾಡಬೇಕಾ ಗುತ್ತದೆ. ಈ ಹಂಚಿಕೆ ಮಾಡುವ ಜವಬ್ದಾರಿ ಮುಖ್ಯ ಬರಹಗಾರ ಅಶ್ವಿನಿಯ ಕರ್ತವ್ಯವಾಗಿದೆ.

ಅಶ್ವಿನಿ ಸರಕಾರದಿಂದ ಒಕ್ಕೂಟಕ್ಕೆ ಬಂದ ಹಣವನ್ನು ಬೇರೆ ಬೇರೆ ಸ್ವಸಹಾಯ ಸಂಘಗಳಿಗೆ ಹಂಚಿಕೆ ಮಾಡದೇ ಹಾಗೂ ಆಕೆ ಅಧ್ಯಕ್ಷರಾಗಿರುವ ಮಂದಾರ ಸ್ವಸಹಾಯ ಸಂಘದ ಹೆಸರಿನಲ್ಲಿ ಹಾಗೂ ಕೆಲವೊಂದು ಸಂಘದ ಸದಸ್ಯರ ಹೆಸರಿನಲ್ಲಿ ಒಕ್ಕೂಟದ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ಯವರ ಸಹಿ ಮತ್ತು ಸೀಲನ್ನು ನಕಲಿ ಮಾಡಿ ಹಾಗೂ ಬೇರೆ ಬೇರೆ ಸ್ವಸಹಾಯ ಸಂಘದ ಸದಸ್ಯರ ನಕಲಿ ಸಹಿಯನ್ನು ಮಾಡಿ ಒಟ್ಟು 33,50,000ರೂ. ಹಣವನ್ನು ದುರುಪಯೋಗ ಮಾಡಿಕೊಂಡು ಮೋಸ ಮಾಡಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News