ಸಂಜೀವಿನಿ ಒಕ್ಕೂಟದಲ್ಲಿ ಅವ್ಯವಹಾರ: ತನಿಖೆಗೆ ಆಗ್ರಹ

Update: 2026-08-09 19:48 IST

ಉಡುಪಿ, ಆ.9: ಮಹಿಳಾ ಸಬಲೀಕರಣದ ಸದುದ್ದೇಶದಿಂದ ಪ್ರಾರಂಭ ವಾದ ಸಂಜೀವಿನಿ ಸ್ವಹಾಯ ಸಂಘಗಳ ಒಕ್ಕೂಟದಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಬಗ್ಗೆ ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಿ ಗ್ರಾಮೀಣ ಭಾಗದ ಮಹಿಳೆಯರಿಗೆ ನ್ಯಾಯ ಒದಗಿಸುವಂತೆ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲೆಯ 155 ಸ್ವಸಹಾಯ ಸಂಘಗಳ ಒಕ್ಕೂಟಗಳ ಪೈಕಿ 3 ಸ್ವಸಹಾಯ ಸಂಘಗಳ ಒಕ್ಕೂಟಗಳಲ್ಲಿ ಹಣ ದುರುಪಯೋಗದ ಪ್ರಕರಣಗಳು ಕಳೆದ ಎರಡು ದಿನಗಳಲ್ಲಿ ಬೆಳಕಿಗೆ ಬಂದಿದೆ. 155 ಗ್ರಾಪಂಗಳಲ್ಲಿ ತಲಾ ಒಂದ ರಂತೆ ಸ್ವಸಹಾಯ ಸಂಘದ ಒಕ್ಕೂಟಗಳು ಕಾರ್ಯಾಚರಿಸುತ್ತಿದ್ದು ಪ್ರತಿ ಒಕ್ಕೂಟಗಳಲ್ಲಿ 10ರಿಂದ 70ರ ವರೆಗೂ ಸ್ವಸಹಾಯ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಸುಮಾರು 90,000 ಮಹಿಳೆಯರು ಸಂಜೀವಿನಿ ಯೋಜನೆ ಅಡಿ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಇಂತಹ ಸಂದರ್ಭದಲ್ಲಿ 3 ಒಕ್ಕೂಟಗಳಲ್ಲಿ ರೂ.80 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗ ಪ್ರಕರಣ ಸಂಜೀವಿನಿ ಸದಸ್ಯರಿಗೆ ಆಘಾತಕಾರಿ ವಿಷಯವಾಗಿ ಪರಿಣಮಿಸಿದ್ದು, ದಿಕ್ಕು ತೋಚದಂತಾಗಿದೆ. ಇಂತಹ ಪ್ರಕರಣಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿರುವ ಸಾಧ್ಯತೆ ಇದೆ. ಕೇಂದ್ರ ಸರಕಾರ ಪ್ರಾಯೋಜಿತ ಹಾಗೂ ರಾಜ್ಯ ಸರ್ಕಾರ ಅನುಷ್ಠಾನ ಗೊಳಿಸುತ್ತಿರುವ ಮಹತ್ವದ ಯೋಜನೆಯಲ್ಲಿ ಉಡುಪಿಯಂತಹ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿರುವುದು ಅತ್ಯಂತ ಖಂಡನೀಯ.

ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದ್ದು ಹಣ ದುರುಪಯೋಗದ ಪ್ರಕರಣಗಳಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಕಾನೂನಿನಡಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಇದೇ ರೀತಿ ನಡೆದಿರುವ ಸಾಧ್ಯತೆ ಇದ್ದು, ತಕ್ಷಣ ರಾಜ್ಯ ಸರಕಾರ ಎಚ್ಚೆತ್ತು ಅಗತ್ಯ ಕ್ರಮ ವಹಿಸಬೇಕಿದೆ ಎಂದು ಸಂಧ್ಯಾ ರಮೇಶ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News