ಉಡುಪಿ: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ

Update: 2026-08-10 22:06 IST

ಉಡುಪಿ, ಆ.10: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗೂ ರಾಷ್ಟ್ರೀಯ ಅರೋಗ್ಯ ಅಭಿಯಾನದ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮ ಇಂದು ನಗರದ ಸೈಂಟ್ ಸಿಸಿಲಿ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಮಕ್ಕಳಲ್ಲಿ ಜಂತು ಹುಳುಗಳ ಬಾಧೆಯಿಂದ ಅಪೌಷ್ಟಿಕತೆ ಹಾಗೂ ರಕ್ತಹೀನತೆ ಉಂಟಾಗಿ ಅವರ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಈ ಜಂತುಹುಳಗಳ ನಿವಾರಣೆಗಾಗಿ ವರ್ಷದಲ್ಲಿ ಎರಡು ಬಾರಿ ಜಂತು ಹುಳು ನಿವಾರಣಾ ಮಾತ್ರೆ ನೀಡಲಾಗುತ್ತಿದ್ದು, ಜಿಲ್ಲೆಯ 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳು ಈ ಮಾತ್ರೆಯನ್ನು ಸೇವಿಸುವ ಮೂಲಕ ಆರೋಗ್ಯಯುತ ಜೀವನ ನಡೆಸಬೇಕು ಎಂದರು.

ಇಂದು 1ರಿಂದ 19 ವರ್ಷದೊಳಗಿನ ಜಿಲ್ಲೆಯ ಸುಮಾರು 2,72,477 ಮಕ್ಕಳಿಗೆ ಅಲ್ಬೆಂಡಾಝೋಲ್ ಮಾತ್ರೆ ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. 1 ರಿಂದ 5 ವರ್ಷದ ಮಕ್ಕಳಿಗೆ ಅಂಗನವಾಡಿಗಳಲ್ಲಿ ಹಾಗೂ 6ರಿಂದ 19 ವರ್ಷದೊಳಗಿನವರಿಗೆ ಸರಕಾರಿ, ಅನುದಾನಿತ, ಖಾಸಗಿ ಶಾಲಾ-ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರೆಗಳನ್ನು ನೀಡಲಾಗುವುದು ಎಂದ ಅವರು, ಇಂದು ಮಾತ್ರೆ ಪಡೆಯದ ಮಕ್ಕಳಿಗೆ ಆ. 17ರ ಮೋಪ್ ಅಪ್ ದಿನದಂದು ಮಾತ್ರೆಗಳನ್ನು ನೀಡಲಾಗುವುದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಜಿ ಹುಬ್ಬಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ, ಭಯ, ಅಂಜಿಕೆ ಇಲ್ಲದೇ ಜಂತುಹುಳು ನಿವಾರಣಾ ಮಾತ್ರೆಗಳನ್ನು ಸೇವಿಸಬಹುದು. ಇದರಿಂದ ಯಾವುದೇ ಅಡ್ಡಪರಿಣಾಮಗಳು ಆಗುವುದಿಲ್ಲ ಎಂದರು. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠ ಕ್ಯಾನ್ಸರ್ ತಡೆಗೆ ಹೆಚ್.ಪಿ. ಲಸಿಕೆಯೊಂದೆ ಸಹಕಾರಿಯಾಗಿದ್ದು, 14 ರಿಂದ 15 ವರ್ಷ ವಯಸ್ಸಿನ ಒಳಗಿನ ಇದುವರೆಗೂ ಹೆಚ್.ಪಿ.ಲಸಿಕೆ ಪಡೆಯದ ಹೆಣ್ಣು ಮಕ್ಕಳು ಲಸಿಕೆ ಪಡೆಯುವಂತೆ ತಿಳಿಸಿದರು.

ನಗರಾಭಿವೃಧ್ದಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು ಮಾತನಾಡಿದರು. ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಜ್ಯೋತ್ಸ್ನಾ ಬಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಜಂತುಹುಳದ ಮಾತ್ರೆಯನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ, ಸೈಂಟ್ ಸಿಸಿಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರೀತಿ ಕ್ರಾಸ್ತಾ, ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಹೆಚ್ಚೇಶ್ ಹೆಚ್.ಎಸ್ ಸ್ವಾಗತಿಸಿ, ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಹೆಚ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ವಂದಿಸಿದರು. 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News