ಇಎಸ್‌ಐ ಚಿಕಿತ್ಸೆಯಲ್ಲಿ ಅಧಿಕಾರಿಗಳಿಂದ ಗೊಂದಲ; ಸರಿಪಡಿಸಲು ಸಚಿವೆ ಶೋಭಾಗೆ ಸಂಸದ ಕೋಟ ಮನವಿ

Update: 2026-08-10 21:30 IST

ಉಡುಪಿ, ಆ.10: ಇಎಸ್‌ಐ ಇಲಾಖಾಧಿಕಾರಿಗಳ ಗೊಂದಲದ ನಿಲುವಿ ನಿಂದಾಗಿ ಕರ್ನಾಟಕ ರಾಜ್ಯದಲ್ಲಿ ನೊಂದಾ ಯಿತ ಖಾಸಗಿ ಆಸ್ಪತ್ರೆಗಳ ಮೂಲಕ ವ್ಯವಸ್ಥಿತವಾಗಿ ನಡೆಯುತ್ತಿದ್ದ ಇಎಸ್‌ಐ ಚಿಕಿತ್ಸೆಯಲ್ಲಿ ರೋಗಿಗಳಿಗೆ ತೊಂದರೆ ಯಾಗುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಕಾರ್ಮಿಕ ಸಚಿವೆ ಶೋಭಾ ಕರಂದ್ಲಾಜೆ ಅವರ ಗಮನ ಸೆಳೆದಿದ್ದಾರೆ.

ಖಾಸಗಿ ಆಸ್ಪತ್ರೆಗಳು ಗಂಭೀರ ಸ್ಥಿತಿಯಲ್ಲಿ ಬಂದ ರೋಗಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಬೇಕೆಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದರಿಂದ ಹೃದಯಾಘಾತ, ಮೆದುಳು ಶಸ್ತ್ರಚಿಕಿತ್ಸೆ ಮುಂತಾದ ಗಂಭೀರ ಮತ್ತು ತುರ್ತು ಚಿಕಿತ್ಸೆ ನೀಡಬೇಕಾದ ರೋಗಿಗಳಿಗೆ ತುರ್ತು ಚಿಕಿತ್ಸೆ ಪಡೆಯಲು ತೊಂದರೆ ಯಾಗುತ್ತಿದೆ. ಇಲಾಖೆಯ ಈ ಸೂಚನೆ ಯಿಂದ ಚಿಕಿತ್ಸೆ ನಿರತ ವೈದ್ಯಾಧಿಕಾರಿಗಳು ರೋಗಿಗಳಿಗೆ ಚಿಕಿತ್ಸೆ ನೀಡದ ಸ್ಥಿತಿ ಎದುರಾದರೆ, ಮಾರಣಾಂತಿಕ ಸ್ಥಿತಿಯಲ್ಲಿರುವ ರೋಗಿ ವಿಡಿಯೋ ಕರೆಗೆ ಪ್ರತಿಕ್ರಿಯೆ ನೀಡಲಾಗದ, ಚಿಕಿತ್ಸೆ ನೀಡಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಕೋಟ ವಿವರಿಸಿದರು.

ಈ ವಿಷಯದ ಕೇಂದ್ರ ಕಾರ್ಮಿಕ ಇಲಾಖೆ ಕೂಡಲೇ ಮಧ್ಯಪ್ರವೇಶಿಸಿ ಗೊಂದಲ ಪರಿಹರಿಸಿ ಇಎಸ್‌ಐ ಫಲಾನುಭವಿ ಗಳ ನೆರವಿಗೆ ಬರಬೇಕೆಂದು ಕೋಟ ಶ್ರೀನಿವಾಸ ಪೂಜಾರಿ ಕಾರ್ಮಿಕ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಹೊಸದಿಲ್ಲಿಯಲ್ಲಿ ಮನವಿ ಮಾಡಿದರು.

ವಾರಾಂತ್ಯದಲ್ಲಿ ಬರುವ ರಜಾ ದಿನಗಳ ಸಂದರ್ಭ, ತಡರಾತ್ರಿ ಬರುವ ರೋಗಿಗಳಿಗೆ ಇದರಿಂದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಐಸಿಯುಗೆ ದಾಖಲಾದ ಮತ್ತು ಆಪರೇಷನ್ ಥಿಯೇಟರ್‌ನಲ್ಲಿರುವ ಗಂಭೀರ ರೋಗಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಆಸ್ಪತ್ರೆಗಳಲ್ಲಿ ನೆಟ್ವರ್ಕ್ ಸಮಸ್ಯೆಗಳಿಂದ ವಿಡಿಯೋ ಕರೆ ಸಿಗುತ್ತಿಲ್ಲ. ಉಡುಪಿ ಜಿಲ್ಲೆಯ ಮಣಿಪಾಲದ ಕೆಎಂಸಿ ಮತ್ತು ಆದರ್ಶದಂತಹ ಆಸ್ಪತ್ರೆ ಗಳು ಸಹ ರೋಗಿಗಳಿಗೆ ಚಿಕಿತ್ಸೆ ನೀಡಲು ಕಷ್ಟಪಡುತ್ತಿವೆ. ನಮ್ಮ ಮನವಿಗೆ ಇಲಾಖೆ ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದು ಕೋಟ ವಿವರಿಸಿದರು.

ಕೋಟ ಅವರ ಮನವಿಗೆ ಕೂಡಲೇ ಸ್ಪಂಧಿಸಿದ ಸಚಿವೆ ಶೋಭಾ, ಇಎಸ್‌ಐ ಡೈರೆಕ್ಟರ್ ಜನರಲ್ ಅಶೋಕ್ ಕುಮಾರ್ ಸಿಂಗ್ ಅವರನ್ನು ಸಂಪರ್ಕಿಸಿ ಇಎಸ್‌ಐ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಯಾವುದೇ ತೊಂದರೆ ಮಾಡದೆ ಇಎಸ್‌ಐನ್ನು ಅನುಷ್ಠಾನಗೊಳಿಸುವಂತೆ ಆದೇಶಿಸಿದರು. ಯಾವುದೇ ಅಧಿಕಾರಿ ಕಾರಣವಿಲ್ಲದೆ ಗೊಂದಲ ಮಾಡಿದರೆ ಸೂಕ್ತಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದ್ದಾರೆ ಎಂದು ಸಂಸದ ಕೋಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News