ಉಡುಪಿ, ಸೆ.20: ಕಠಿಣ ತರಬೇತಿ, ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ಇನ್ಶಾ ತಸ್ಕೀನ್, ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಇದೀಗ ಅವರು ವಾಣಿಜ್ಯ ಪೈಲಟ್ ಪರವಾನಗಿ ಪಡೆದು ಉಡುಪಿ ತಾಲೂಕಿನ ಮೊದಲ ಮಹಿಳಾ ವಾಣಿಜ್ಯ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ಶಾ ತಸ್ಕೀನ್, ಉಡುಪಿ ನಗರದ ಬೈಲೂರಿನ ಇಕ್ಲಾಕ್ ಅಹಮದ್ ಮತ್ತು ಸೈಯದ್ ತಬಸ್ಸುಮ್ ದಂಪತಿಯ ಪುತ್ರಿ. ಅವರ ಸಹೋದರ ದೆಹಲಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇನ್ಶಾ ತಸ್ಕೀನ್ ಬ್ರಹ್ಮಾವರ ಲಿಟಲ್ ರಾಕ್ ಇಂಡಿಯನ್ ಸ್ಕೂಲ್‌ನಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದು, ಬಳಿಕ ಪೈಲಟ್ ಆಗುವ ಕನಸಿನೊಂದಿಗೆ ರೆಡ್ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದರು. ದೆಹಲಿಯ ರೆಡ್ಬರ್ಡ್ ಸಂಸ್ಥೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಗ್ರೌಂಡ್ ಕ್ಲಾಸ್ ಹಾಗೂ ಅಗತ್ಯ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿ, ಎಲ್ಲ ಪರೀಕ್ಷೆಗಳಲ್ಲೂ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾದರು.

ತರಬೇತಿಯ ಮುಂದಿನ ಹಂತವಾಗಿ ಬೆಳಗಾವಿ ಫ್ಲೈಯಿಂಗ್ ಬೇಸ್‌ನಲ್ಲಿ 200 ಗಂಟೆಗಳ ಹಾರಾಟದ ತರಬೇತಿ ಯನ್ನು ಯಶಸ್ವಿಯಾಗಿ ಪೂರ್ಣ ಗೊಳಿಸಿ, ವಾಣಿಜ್ಯ ಪೈಲಟ್ ಪರವಾನಗಿಯನ್ನು ಪಡೆದುಕೊಂಡಿದ್ದಾರೆ.

ಕಠಿಣ ತರಬೇತಿ, ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿರುವ ಇನ್ಶಾ ತಸ್ಕೀನ್, ಸಾಧನೆ ಉಡುಪಿ ಜಿಲ್ಲೆಯ ಯುವತಿಯರಿಗೆ, ಅದರಲ್ಲೂ ವಿಮಾನಯಾನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಪ್ರೇರಣೆಯಾಗಿದೆ.

‘ಮೊದಲಿಗೆ ಪೈಲಟ್ ಆಗುವ ಬಗ್ಗೆ ನನಗೆ ಯಾವುದೇ ಆಸಕ್ತಿ ಇರಲಿಲ್ಲ. ಎಸೆಸೆಲ್ಸಿ ಓದುತ್ತಿದ್ದ ಸಂದರ್ಭದಲ್ಲಿ ಒಮ್ಮೆ ದೆಹಲಿಗೆ ಹೋಗಿದ್ದೆವು. ಅಲ್ಲಿನ ಏರ್‌ಪೋರ್ಟ್ ನೋಡಿದಾಗ ನನಗೂ ಪೈಲಟ್ ಆಗಬೇಕು ಎಂಬ ಆಸೆ ಹುಟ್ಟಿಕೊಂಡಿತು. ಮನೆಯವರ ಸಹಕಾರದಿಂದ ನನ್ನ ಕನಸನ್ನು ನನಸಾಗಿಸಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ವಾಣಿಜ್ಯ ಪೈಲಟ್ ಆಗಿ ಕಾರ್ಯ ನಿರ್ವಹಿಸುವ ಗುರಿಯನ್ನು ಹೊಂದಿದ್ದು, ವಿಮಾನಯಾನ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಕನಸು ಹೊಂದಿದ್ದೇನೆ ಎನ್ನುತ್ತಾರೆ ಕ್ಯಾ.ಇನ್ಶಾ ತಸ್ಕೀನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor