ಶಿರೂರು: ಬುಖಾರಿ ಕಾಲೋನಿ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಧರಣಿ
ಬೈಂದೂರು, ಸೆ.20: ಶಿರೂರು ಗ್ರಾಮದ ವಾರ್ಡ್ ಸಂಖ್ಯೆ 2ರ ಬುಖಾರಿ ಕಾಲೋನಿಯಲ್ಲಿ ಕಳೆದ 24 ವರ್ಷಗಳಿಂದ ರಸ್ತೆ ನಿರ್ಮಿಸದಿರುವುದನ್ನು ಖಂಡಿಸಿ ಹಾಗೂ ಕೂಡಲೇ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಿರೂರು ಗ್ರಾಮ ಬುಖಾರಿ ಕಾಲೋನಿ ಅಭಿವೃದ್ಧಿ ಸಮಿತಿ ವತಿಯಿಂದ ಬೈಂದೂರು ತಾಲೂಕು ಕಛೇರಿ ಮುಂಭಾಗ ದಲ್ಲಿ ಧರಣಿ ನಡೆಸಲಾಯಿತು.
ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಬುಖಾರಿ ಕಾಲೋನಿ ನಿವಾಸಿಗಳು ಮೂಲಸೌಕರ್ಯದ ಕೊರತೆ ಯಿಂದ ಸಮಸ್ಯೆ ಎದುರಿಸುತ್ತಿದ್ದು, ರಸ್ತೆ ನಿರ್ಮಾಣ ಮಾಡಿಕೊಡುವಂತೆ ಹಲವು ಬಾರಿ ಸಂಬಂಧಪಟ್ಟ ಚುನಾಯಿತ ಪ್ರತಿನಿಧಿಗಳು ಹಾಗೂ ಕ್ಷೇತ್ರದ ನಾಯಕರಿಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ವರ್ಷಗಳು ಕಳೆದರೂ ಈವರೆಗೆ ಬೇಡಿಕೆ ಈಡೇರಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಬುಖಾರಿ ಕಾಲೋನಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೇಕ್ ಸಯ್ಯಿದ್, ಕಳೆದ 24 ವರ್ಷಗಳಿಂದ ನಮ್ಮ ವಾರ್ಡ್ನ ರಸ್ತೆ ನಿರ್ಮಾಣಕ್ಕಾಗಿ ಮನವಿ ಮಾಡುತ್ತಿದ್ದೇವೆ. ಪ್ರತಿ ಬಾರಿ ಮನವಿ ಮಾಡಿದಾಗಲೂ ರಸ್ತೆ ನಿರ್ಮಾಣದ ಕುರಿತು ಆಶ್ವಾಸನೆಗಳನ್ನು ನೀಡ ಲಾಗುತ್ತಿದೆಯೇ ಹೊರತು ಈವರೆಗೆ ಆ ಭರವಸೆ ಈಡೇರಿಲ್ಲ. ಇದರಿಂದಾಗಿ ನಿವಾಸಿಗಳು ಹಲವು ವರ್ಷಗಳಿಂದ ನಿರಾಸೆ ಅನುಭವಿಸುವಂತಾಗಿದೆ ಎಂದು ದೂರಿದರು.
ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಶೀಘ್ರವೇ ರಸ್ತೆ ನಿರ್ಮಾಣದ ಕುರಿತು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಉಪಾಧ್ಯಕ್ಷ ಎಂ.ಎಂ.ಖಾಜಾ, ಕಾರ್ಯದರ್ಶಿ ಅಬ್ದುಲ್ ಹಮೀದ್, ಪ್ರಮುಖರಾದ ಎಚ್.ಎಸ್. ಸಿದ್ದೀಕ್, ಪಟ್ಗಾರ್ ಶಕೀಲ್, ಶಾನು ಖಾಲೀದ್, ಫಾಹೀಕ್ ಖಾನ್, ಅಬ್ದುಲ್ ರಝಾಕ್, ಅನ್ವರ್ ಶಿರೂರು, ಎಂ.ಎಂ.ಮುಸ್ತಕೀಮ್ ಉಪಸ್ಥಿತರಿದ್ದರು.