ಉಡುಪಿ, ಸೆ.24: ಉದ್ಯಾವರದ ಕುತ್ಪಾಡಿಯಲ್ಲಿರುವ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರಗಳ ಆಶ್ರಯದಲ್ಲಿ ಆಯುರ್ವೇದ ಸಂಶೋಧನೆ ಹಾಗೂ ದೇಹದ ರಕ್ಷಣಾ ವ್ಯವಸ್ಥೆಯನ್ನು ಅಸ್ತವ್ಯಸ್ಥಗೊಳಿಸುವ ವ್ಯಾದಿಗಳ ಕುರಿತು ಅಂತಾರಾಷ್ಟ್ರೀಯ ವೈದ್ಯಕೀಯ ಸಮ್ಮೇಳನ ‘ಕ್ಷಮತ್ವಂ’ ಸೆ.29ರಿಂದ ಅ.1ರವರೆಗೆ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ. ತಿಳಿಸಿದ್ದಾರೆ.

ಉಡುಪಿಯಲ್ಲಿಂದ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಸಮ್ಮೇಳನ ಸೆ.30ರಂದು ಬೆಳಗ್ಗೆ 10 ಗಂಟೆಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ನಡೆಯ ಲಿದ್ದು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ ಎಂದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಆಯುಷ್ ಸಚಿವಾಲಯದ ಆಯುರ್ವೇದ ಸಲಹೆಗಾರ ಡಾ.ಕೌಸ್ತುಭ ಉಪಾದ್ಯಾಯ, ಭಾರತೀಯ ವೈದ್ಯ ಪದ್ಥತಿಯ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಪ್ರೊ.(ಡಾ) ಅನಿಷಾ ಉಪೇಂದ್ರ ಕೋತ್ಕರ್ ಹಾಗೂ ರಾಜ್ಯ ಆಯುಷ್ ಇಲಾಖೆಯ ಕಮಿಷನರ್ ಡಾ.ಸುನಿಲ್ ಪನ್ವಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಸಮ್ಮೇಳನದ ಸಮಾರೋಪ ಸಮಾರಂಭ ಅ.1ರಂದು ಸಂಜೆ 4:00ಗಂಟೆಗೆ ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಶೈಕ್ಷಣಿಕ ಸೊಸೈಟಿಯ ಕಾರ್ಯದರ್ಶಿ ಡಿ.ಹರ್ಷೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹೊಸದಿಲ್ಲಿಯ ಆಯುಷ್ ಸಚಿವಾಲಯದ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದ ನಿರ್ದೇಶಕ ಡಾ.ವಂದನಾ ಸಿರೋಹಿ ಮುಖ್ಯ ಅತಿಥಿಗಳಾಗಿರುವರು.

ಹೊಸದಿಲ್ಲಿಯ ಆಲ್‌ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದದ ನಿರ್ದೇಶಕ ಪ್ರೊ. ಪ್ರದೀಪ್‌ಕುಮಾರ್ ಪ್ರಜಾಪತಿ, ಬೆಂಗಳೂರು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಡಾ.ಸಿದ್ಧನಗೌಡ ಎ.ಪಾಟೀಲ್ ಎಸ್‌ಡಿಎಂ ಉಜಿರೆಯ ಪ್ರೊ.ಡಾ.ಪ್ರಸನ್ನ ನರಸಿಂಹ ರಾವ್ ಅತಿಥಿಗಳಾಗಿ ಉಪಸ್ಥಿತರಿರುವರು ಎಂದರು.

ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಸೆ.29ರಂದು ಪ್ರಿಕಾನ್ಫರೆನ್ಸ್ ಕಾರ್ಯಾಗಾರ ನಡೆಯಲಿದ್ದು, ಇದರಲ್ಲಿ ವಿದ್ಯಾರ್ಥಿ ಗಳು, ಸಂಶೋಧಕರು, ಶಿಕ್ಷಣ ತಜ್ಞರು, ನಾಡಿನ ನಾನಾ ಮೂಲೆಗಳಿಂದ ಆಗಮಿಸುವ ಆಯುರ್ವೇದ ವೈದ್ಯರು ಭಾಗವಹಿಸಲಿದ್ದಾರೆ ಎಂದು ಡಾ.ಮಮತಾ ತಿಳಿಸಿದರು.

ಸಮ್ಮೇಳನದಲ್ಲಿ ರಾಜ್ಯದಿಂದ 600 ಮಂದಿ, ಹೊರರಾಜ್ಯಗಳಿಂದ 800 ಹಾಗೂ ವಿದೇಶಗಳ ತಜ್ಞರು ಸೇರಿದಂತೆ 1500ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.ಹೊಸದಿಲ್ಲಿಯ ಎಐಐಎಯ ಪ್ರಾದ್ಯಾಪಕ ಡಾ.ಶ್ರೀನಿವಾಸ ಹೆಜಮಾಡಿ ಆಚಾರ್ಯ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಪ್ರಸನ್ನ ಎನ್.ಮೊಗಸಾಲೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಎಂ ಕಾಲೇಜಿನ ಉಪಪ್ರಾಂಶುಪಾಲ ಡಾ.ನಾಗರಾಜ್ ಎಸ್., ಪ್ರಚಾರ ಸಮಿತಿಯ ಡಾ.ಚೈತ್ರ ಹೆಬ್ಬಾರ್, ಡಾ.ಅಪರ್ಣ ಜೈನ್, ಡಾ.ಎ.ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor