ಉಡುಪಿ, ಸೆ.24: ರಷ್ಯಾದಿಂದ ತೈಲ ಮತ್ತು ಅನಿಲವನ್ನು ಖರೀದಿಸುವ ದೇಶಗಳ ಮೇಲೆ ಶೇ.100ರಷ್ಟು ಸುಂಕ ವನ್ನು ವಿಧಿಸಲು ಅಮೆರಿಕದ ಅಧ್ಯಕ್ಷರಿಗೆ ವ್ಯಾಪಕ ಅಧಿಕಾರವನ್ನು ನೀಡುವ ಹೊಸ ‘ಯುಎಸ್ ನಿರ್ಬಂಧಗಳ ಕಾಯಿದೆ’ಯನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ.

ವ್ಯಾಪಾರವನ್ನು ಅಸ್ತ್ರವನ್ನಾಗಿಸಿಕೊಳ್ಳುವ ಮೂಲಕ, ಯಾರು ಯಾರಿಂದ ತೈಲವನ್ನು ಖರೀದಿಸಬೇಕು ಎಂಬುದನ್ನು ನಿರ್ಧರಿಸುವ ಹಕ್ಕನ್ನು ತನ್ನದಾಗಿಸಿಕೊಳ್ಳಲು ಯುಎಸ್ ಪ್ರಯತ್ನಿಸುತ್ತಿದೆ. ಇತರ ದೇಶಗಳ ವಿದೇಶಾಂಗ ಮತ್ತು ಆರ್ಥಿಕ ನೀತಿಗಳನ್ನು ನಿರ್ದೇಶಿಸುವ ಈ ಕಾನೂನು, ಆ ದೇಶಗಳ ಸಾರ್ವಭೌಮತ್ವ ಮತ್ತು ಘನತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಿಪಿಎಂನ ಜಿಲ್ಲಾ ಕಾರ್ಯದರ್ಶಿ ಸುರೇಶ ಕಲ್ಲಾಗರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲೆ ಭಾರೀ ಪ್ರಮಾಣದಲ್ಲಿ ಅವಲಂಬಿತವಾಗಿರುವ ಭಾರತವು, ರಷ್ಯಾ ದಿಂದ ಗಣನೀಯ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಈ ಕ್ರಮಕ್ಕೆ ಗುರಿಯಾಗ ಬಹುದಾದ ದೇಶಗಳಲ್ಲಿ ಒಂದಾಗಿದೆ. ಮೋದಿ ಸರ್ಕಾರವು ಯುಎಸ್‌ನ್ನು ಪಾಲುದಾರ ಎಂದು ಪರಿಗಣಿಸುವುದನ್ನು ಮತ್ತು ಯುಎಸ್ ಸಾಮ್ರಾಜ್ಯಶಾಹಿಯ ಬೆದರಿಕೆ ತಂತ್ರಗಳಿಗೆ ಮಣಿಯುವುದನ್ನು ನಿಲ್ಲಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor