ಕ್ರೈಸ್ತ ಧರ್ಮಗುರುಗಳ ಕ್ರಿಕೆಟ್ ಪಂದ್ಯಾಟ: ವಿಯಾನ್ನಿ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್
ಉಡುಪಿ: ಪ್ರತಿದಿನ ಪವಿತ್ರ ಬಲಿಪೀಠದ ಬಳಿ ಧಾರ್ಮಿಕ ಸೇವೆಯಲ್ಲಿ ತೊಡಗಿಕೊಳ್ಳುವ ಉಡುಪಿ ಧರ್ಮಪ್ರಾಂತ್ಯದ ಧರ್ಮ ಗುರುಗಳು ರವಿವಾರ ಪವಿತ್ರ ಬಲಿಪೂಜೆಯ ಬಳಿಕ ಕ್ರಿಕೆಟ್ ಬ್ಯಾಟ್ ಹಿಡಿದ ಮೈದಾನಕ್ಕಿಳಿದು ವಿಯಾನ್ನಿ ಕಪ್ ಕ್ರಿಕೆಟ್ ಟೂರ್ನಮೆಂಟ್ ಆಡುವ ಮೂಲಕ ಗಮನ ಸೆಳೆದರು.
ಉಡುಪಿ ಕನ್ನರ್ಪಾಡಿ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಉಡುಪಿ ಕಥೊಲಿಕ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ ಪೂರ್ಣ ಬೆಂಬಲ ಹಾಗೂ ಸಹಕಾರದೊಂದಿಗೆ ನಡೆದ ಪಂದ್ಯಾವಳಿಯಲ್ಲಿ ಒಟ್ಟು ಐದು ತಂಡಗಳು ಭಾಗವಹಿಸಿದ್ದವು.
ವಿಯಾನ್ನಿ ಟೈಟನ್ಸ್, ವಿಯಾನ್ನಿ ಚಾಲೆಂಜರ್ಸ್, ವಿಯಾನ್ನಿ ಕ್ಯಾಪಿಟಲ್ಸ್, ವಿಯಾನ್ನಿ ವಾರಿಯರ್ಸ್ ಹಾಗೂ ವಿಯಾನ್ನಿ ಸೂಪರ್ ಕಿಂಗ್ಸ್ ತಂಡಗಳು ನಾಕೌಟ್ ಮಾದರಿಯಲ್ಲಿ ಸೆಣಸಾಡಿದವು. ಒಟ್ಟು ಸುಮಾರು 60 ಮಂದಿ ಧರ್ಮಗುರು ಗಳು, ಡಿಕನ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಪಂದ್ಯಾವಳಿಯಲ್ಲಿ ವಿಯಾನ್ನಿ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ವಿಯಾನ್ನಿ ಕ್ಯಾಪಿಟಲ್ಸ್ ತಂಡ ರನ್ನರ್ಸ್ ಅಪ್ ಸ್ಥಾನ ಪಡೆಯಿತು. ಪಾಂಬೂರು ಚರ್ಚಿನ ಡೀಕನ್ ಸ್ಟೀಫನ್ ಡಿಸೋಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಕಟಪಾಡಿಯ ಹೋಲಿ ಕ್ರಾಸ್ ಸೆಮಿನರಿಯ ಫಾ.ಜೋಜೋ ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಯನ್ನು ಪಡೆದುಕೊಂಡರು.
ಟೂರ್ನಮೆಂಟ್‌ನಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಗುರು ಗಳೊಂದಿಗೆ ವಿವಿಧ ಧಾರ್ಮಿಕ ಸಭೆಗಳಾದ ಹೋಲಿ ಕ್ರಾಸ್, ಕಾರ್ಮೆಲೈಟ್ಸ್ ಪ್ರಿಸ್ಟ್, ಸಾಲೇಶಿಯನ್ ಡಾನ್ ಬಾಸ್ಕೊ, ಕಾಪುಚಿನ್ ಸಭೆಯ ಧರ್ಮಗುರುಗಳು ಸಹ ಸೇರಿದ್ದರು. ಕ್ರಿಕೆಟ್ ಪಂದ್ಯಾಟಕ್ಕೆ ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಎಫ್ ಲೂವಿಸ್ ಚಾಲನೆ ನೀಡಿ ಶುಭ ಹಾರೈಸಿದರು.
ಧರ್ಮಪ್ರಾಂತ್ಯದ ಕುಲಪತಿ ವಂ.ಸ್ಟೀಫನ್ ಡಿಸೋಜ, ನಿವೃತ್ತ ಧರ್ಮಗುರು ವಂ.ಆಲ್ಫೋನ್ಸ್ ಡಿಲೀಮಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಶಿರ್ವ ವಲಯ ಪ್ರಧಾನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್ ಸೇರಿದಂತೆ ಧರ್ಮಪ್ರಾಂತ್ಯದ ವಿವಿಧ ಚರ್ಚುಗಳ ಧರ್ಮಗುರುಗಳು ಉಪಸ್ಥಿತರಿದ್ದರು.