ಉಡುಪಿ, ಸೆ.28: ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ಇ.ಎಸ್.ಐ. ಆಸ್ಪತ್ರೆ ಕಾಮಗಾರಿ ಸ್ಥಳಕ್ಕೆ ಉಡುಪಿ ಶಾಸಕರಾದ ಯಶ್‌ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಾರಂಬಳ್ಳಿ ಗ್ರಾಮದ 5.13 ಎಕ್ರೆ ಜಾಗದಲ್ಲಿ 100 ಬೆಡ್ ಆಸ್ಪತ್ರೆ ಹಾಗೂ ಸಿಬ್ಬಂದಿಗಳಿಗೆ 32 ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆ ಈಗಾಗಲೇ ಕೇಂದ್ರ ಸರಕಾರದಿಂದ ಅನುದಾನ ಮಂಜೂರಾಗಿದ್ದು, ಸುಮಾರು 2 ಕೋಟಿ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಈ ಭಾಗದ ಸುತ್ತಮುತ್ತಲೂ ಜನವಸತಿ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಕ್ಕೂ ಮುನ್ನ ಸ್ಥಳೀಯ ಗ್ರಾಪಂ ಹಾಗೂ ಸ್ಥಳೀಯ ಮುಖಂಡರೊಂದಿಗೆ ಕಾಮಗಾರಿಯ ಸ್ವರೂಪ ಹಾಗೂ ಯೋಜನೆಯ ಬಗ್ಗೆ ಸಮಾಲೋ ಚನೆ ನಡೆಸಿ ಮಳೆ ನೀರು, ರಸ್ತೆ ಸಂಪರ್ಕ, ವ್ಯವಸ್ಥಿತ ತ್ಯಾಜ್ಯ ನಿರ್ವಹಣೆ ಸಹಿತ ಮೂಲ ಸೌಕರ್ಯಗಳ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ಅನುಷ್ಠಾನ ಮಾಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಇ.ಎಸ್.ಐ. ಇಲಾಖೆಯ ಉಪ ನಿರ್ದೇಶಕ ಜತಿನ್ ಮೀನಾ, ಸಾಮಾಜಿಕ ಭದ್ರತಾ ಅಧಿಕಾರಿ ವಿನಾಯಕ, ವಾರಂಬಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಿತ್ಯಾನಂದ ಬಿ.ಆರ್., ಸ್ಥಳೀಯ ಮುಖಂಡರಾದ ರಾಜೇಶ್ ಶೆಟ್ಟಿ ಬಿರ್ತಿ, ಎಸ್.ನಾರಾಯಣ, ನವೀನ್ ಚಂದ್ರ ನಾಯಕ್, ನಿರಂಜನ್ ಶೆಟ್ಟಿ, ದೇವಾನಂದ, ನಾಗವೇಣಿ, ಉಮಾ ಬಾಯಿ, ರಾಜೀವ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor