ಉಡುಪಿ ಜಿಲ್ಲೆಯಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಚಿಂತನೆ: ಸಿಇಓ ಪ್ರತೀಕ್ ಬಾಯಲ್
ವಿಶ್ವ ಪ್ರವಾಸೋದ್ಯಮ ದಿನಾಚರಣೆ
ಉಡುಪಿ, ಸೆ.28: ಜಿಲ್ಲೆಯ ನೈಸರ್ಗಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಹಾಗೂ ಕಡಲತೀರಗಳ ಜೊತೆಗೆ ಗ್ರಾಮೀಣ ಬದುಕು ಮತ್ತು ಕೃಷಿ ಸಂಸ್ಕೃತಿ ಯನ್ನು ಪ್ರವಾಸೋದ್ಯಮದೊಂದಿಗೆ ಬೆಸೆಯಲು ಕೃಷಿ ಪ್ರವಾಸೋದ್ಯ ಮಕ್ಕೆ ಹೆಚ್ಚಿನ ಒತ್ತು ನೀಡುವ ಚಿಂತನೆ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್ ಹೇಳಿದ್ದಾರೆ.
ಕಾಪುವಿನ ಪ್ಯಾಲೇಸ್ ಗಾರ್ಡನ್‌ನಲ್ಲಿ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹಾಗೂ ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಂ ಸಹಯೋಗದಲ್ಲಿ ರವಿವಾರ ಆಯೋಜಿಸಲಾಗಿದ್ದ ‘ಉಡುಪಿ ಟೂರಿಸಂ ಇನ್‌ಫ್ಲುಯೆನ್ಸರ್ಸ್ ಆ್ಯಂಡ್ ಸ್ಟೇಕ್ ಹೋಲ್ಡ್‌ರ್ಸ್ ಮೀಟ್-2026’ನ್ನು ಉದ್ಘಾಟಿಸಿ ಅವರುಮಾತನಾಡುತ್ತಿದ್ದರು.
ಪ್ರವಾಸಿಗರಿಗೆ ಪ್ರವಾಸಿ ತಾಣಗಳು ಕೇವಲ ವೀಕ್ಷಣೆಗೆ ಮಾತ್ರ ಸೀಮಿತ ವಾಗದೇ, ಸ್ಥಳೀಯ ಗ್ರಾಮೀಣ ಜೀವನ ಶೈಲಿ, ಅಲ್ಲಿನ ಕೃಷಿ ಚಟುವಟಿಕೆಗಳು, ಸ್ಥಳೀಯ ಆಹಾರ ಪದ್ಧತಿ ಹಾಗೂ ಕರಾವಳಿಯ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ನೇರವಾಗಿ ಅನುಭವಿಸುವ ಅವಕಾಶ ಕಲ್ಪಿಸಬೇಕು ಎಂಬುದು ಚಿಂತನೆಯ ಭಾಗವಾಗಿದೆ ಎಂದರು.
ಇದರ ಭಾಗವಾಗಿ ವಿಲೇಜ್ ವಾಕ್, ಫಾರ್ಮ್ ವಿಸಿಟ್, ಸ್ಥಳೀಯ ಆಹಾರ ಪರಿಚಯ ಹಾಗೂ ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಅನುಭವ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಪ್ರವಾಸೋದ್ಯಮ ಪ್ಯಾಕೇಜ್‌ಗಳಲ್ಲಿ ಅಳವಡಿಸುವ ಸಾಧ್ಯತೆಗಳ ಕುರಿತು ಚರ್ಚಿಸಲಾಗಿದೆ ಎಂದರು.
ಕರಾವಳಿಯ ಜಾನಪದ ಕಲೆ, ಯಕ್ಷಗಾನ, ಸ್ಥಳೀಯ ಸಂಸ್ಕೃತಿ ಹಾಗೂ ಗ್ರಾಮೀಣ ಪರಂಪರೆಗಳ ಪರಿಚಯದ ಮೂಲಕ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುವ ಉದ್ದೇಶವಿದೆ. ಕೃಷಿ ಪ್ರವಾಸೋದ್ಯಮದಿಂದ ಸ್ಥಳೀಯ ರೈತರು, ಗ್ರಾಮೀಣ ಉದ್ಯಮಗಳು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಕಲಾವಿದರಿಗೆ ಹೆಚ್ಚು ಆರ್ಥಿಕ ಅವಕಾಶಗಳು ಸೃಷ್ಟಿಯಾಗುತ್ತವೆ. ‘ಉಡುಪಿ-ಸೀ ಬ್ರಾಂಡ್’ ಜೊತೆಗೆ ಕೃಷಿ ಮತ್ತು ಗ್ರಾಮೀಣ ಪ್ರವಾಸೋದ್ಯಮಕ್ಕೂ ಹೆಚ್ಚಿನ ಪ್ರಚಾರ ನೀಡುವ ಮೂಲಕ ಜಿಲ್ಲೆಯನ್ನು ವೈವಿಧ್ಯಮಯ ಪ್ರವಾಸಿ ಅನುಭವದ ತಾಣವನ್ನಾಗಿ ರೂಪಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಸ್ಥಳೀಯ ಪ್ರವಾಸಿ ತಾಣಗಳು, ಕೃಷಿ ಮತ್ತು ಗ್ರಾಮೀಣ ಬದುಕಿನ ವೈಶಿಷ್ಟ್ಯಗಳನ್ನು ಪರಿಣಾಮಕಾರಿಯಾಗಿ ಪರಿಚಯಿಸುವ ಮೂಲಕ ಪ್ರವಾಸಿಗರನ್ನು ಆರ್ಕಷಿಸ ಬೇಕು. ಸ್ಥಳೀಯರು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ವಿವಿಧ ಪಾಲುದಾರರು ಒಗ್ಗೂಡಿ ಕಾರ್ಯನಿರ್ವಹಿಸಿದರೆ ಜಿಲ್ಲೆಯ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದರು.
ಕರಾವಳಿ ಪ್ರವಾಸೋದ್ಯಮ ಸಂಘದ ಅಧ್ಯಕ್ಷ ಮನೋಹರ್ ಶೆಟ್ಟಿ ಮಾತನಾಡಿ, ಕರಾವಳಿ ಉಡುಪಿಯ ಪ್ರವಾಸೋ ದ್ಯಮ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ. ಕಡಲತೀರಗಳು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರವಾಸಿ ತಾಣಗಳು ಮತ್ತು ಕರಾವಳಿಯ ನೈಸರ್ಗಿಕ ಸೌಂದರ್ಯವನ್ನು ದೇಶ- ವಿದೇಶಗಳ ಪ್ರವಾಸಿಗರಿಗೆ ಪರಿಣಾಮಕಾರಿಯಾಗಿ ಪರಿಚಯಿಸಬೇಕು. ಅಧಿಕಾರಿಗಳು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳು ಒಟ್ಟಾಗಿ ಕಾರ್ಯ ನಿರ್ವಹಿಸುವ ಮೂಲಕ ಕರಾವಳಿಯೊಂದಿಗೆ ಉಡುಪಿಯನ್ನು ಪ್ರಮುಖ ಪ್ರವಾಸಿ ತಾಣವಾಗಿ ಇನ್ನಷ್ಟು ಅಭಿವೃದ್ಧಿಪಡಿಸಬಹುದು ಎಂದು ಸಲಹೆ ನೀಡಿದರು.
ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಂಧ್ಯ ಮಾತನಾಡಿ, ಪ್ರವಾಸೋದ್ಯಮ ಇನ್‌ಫ್ಲುಯೆನ್ಸರ್ ಗಳು, ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ವಿವಿಧ ಪಾಲುದಾರರ ಸಹಕಾರ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಅತ್ಯಂತ ಮಹತ್ವದ್ದಾಗಿದೆ. ಜಿಲ್ಲೆಯ ಕಡಲತೀರಗಳು, ಧಾರ್ಮಿಕ ಕ್ಷೇತ್ರಗಳು, ನೈಸರ್ಗಿಕ ತಾಣಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪರಿಣಾಮಕಾರಿಯಾಗಿ ಪ್ರಚಾರ ಮಾಡುವ ಮೂಲಕ ದೇಶ-ದೇಶಗಳ ಪ್ರವಾಸಿಗರನ್ನು ಸೆಳೆಯಬಹುದಾಗಿದೆ. ಉತ್ತಮ ಗುಣಮಟ್ಟದ ಸ್ಥಳೀಯ ಕಂಟೆಂಟ್ ಸೃಷ್ಟಿಸುವಲ್ಲಿ ಕಂಟೆಂಟ್ ಕ್ರಿಯೇಟರ್‌ಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಕೃಷಿ ಪ್ರವಾಸೋದ್ಯಮದ ಕುರಿತು ಕಾರ್ಯದರ್ಶಿ ಗೌರವ ಶೇಣವ ಮಾತನಾಡಿದರು.ಇದೇ ಸಂದರ್ಭದಲ್ಲಿ ಜಿಲ್ಲೆಯ 20 ಇನ್‌ಫ್ಲುಯೆನ್ಸರ್‌ಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ವಿವಿಧ ಪಾಲುದಾರರು, ಪ್ರವಾಸೋದ್ಯಮ ಇನ್‌ಫ್ಲುಯೆನ್ಸರ್‌ಗಳು, ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ಇತರರು ಉಪಸ್ಥಿತರಿದ್ದರು. ಸುದೀಪ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.