ಉಡುಪಿ ಜಿಲ್ಲಾಸ್ಪತ್ರೆ ಆರಂಭಿಸುವಂತೆ ಆಗ್ರಹ: ಧರಣಿ ಅಂತ್ಯ
ಉಡುಪಿ, ಅ.5: ಉಡುಪಿಯ ನೂತನ ಜಿಲ್ಲಾ ಆಸ್ಪತ್ರೆಯ ಕಟ್ಟಡ ಆರಂಭಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಧರಣಿ ಸೋಮವಾರ ಅಂತ್ಯ ಕಂಡಿತು.
ರವಿವಾರ ಬೆಳಗ್ಗೆಯಿಂದ ಆರಂಭಿಸಿರುವ 80ಗಂಟೆಗಳ ಉಪವಾಸ ಸತ್ಯಾಗ್ರಹವನ್ನು ಧರಣಿನಿರತರು ಸೋಮವಾರವೂ ಮುಂದುವರೆಸಿದ್ದರು. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಪರವಾಗಿ ಅಪರ ಜಿಲ್ಲಾಧಿಕಾರಿ ಹಬೀದ್ ಗದ್ಯಾಳ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು.
ಉಡುಪಿ ಜಿಲ್ಲಾಸ್ಪತ್ರೆಯ ಯಂತ್ರೋಪಕರಣಗಳ ಅಳವಡಿಕೆ ಕಾರ್ಯವನ್ನು ನಾಳೆಯಿಂದಲೇ ಆರಂಭಿಸಿ, ನ.5ರೊಳಗೆ ರೋಗಿಗಳಿಗೆ ಚಿಕಿತ್ಸೆ ನೀಡ ಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಭರವಸೆ ನೀಡಿದರು. ಆದುದರಿಂದ ಧರಣಿ ಹಾಗೂ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಮನವಿ ಮಾಡಿದರು.
ಕರವೇ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಪರ ಜಿಲ್ಲಾಧಿಕಾರಿ ತಂಪು ಪಾನೀಯವನ್ನು ನೀಡುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಕೈ ಬಿಟ್ಟು ಪ್ರತಿಭಟನೆಯನ್ನು ಮುಕ್ತಾಯಗೊಳಿಸಿದರು. ಜಿಲ್ಲಾಡಳಿತ ನೀಡಿದ ಸಮಯ ದೊಳಗೆ ಆಸ್ಪತ್ರೆ ಆರಂಭವಾಗದಿದ್ದಲ್ಲಿ ನ.6ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುವುದಾಗಿ ಧರಣಿನಿರತರು ಎಚ್ಚರಿಕೆ ನೀಡಿದರು.