ಅಸುರರನ್ನು ರಾಕ್ಷಸರನ್ನಾಗಿ ಚಿತ್ರಿಸಿ ಇತಿಹಾಸ ತಿರುಚುವ ಯತ್ನ: ಜ್ಞಾನ ಪ್ರಕಾಶ ಸ್ವಾಮೀಜಿ
ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬ ‘ಮಹಿಷ ಮಹೋತ್ಸವ’ ಉದ್ಘಾಟನೆ
ಉಡುಪಿ, ಅ.11: ಅಸುರರು ಅಂದರೆ ಶೀಲವಂತರು, ದಾನವಂತರು, ರಕ್ಷರು. ದೇಶ, ಪ್ರಕೃತಿ, ಜನರನ್ನು ರಕ್ಷಿಸಿದ ಮಹಿಷಸುರ ಸಹಿತ ಎಲ್ಲ ಮಹಾ ಪುರಷರನ್ನು ರಾಕ್ಷಸರನ್ನಾಗಿ ಚಿತ್ರಿಸಲಾಗಿದೆ. ಈ ಮೂಲಕ ದೇಶದ ಇತಿಹಾಸ ವನ್ನು ಪುಟಪುಟ, ಪದಪದಗಳಲ್ಲಿ ತಿರುಚಲಾಗಿದೆ. ಈಗ ಇರುವ ಇತಿಹಾಸ ಭಾರತದ ನೈಜ ಇತಿಹಾಸವೇ ಅಲ್ಲ. ಇಲ್ಲಿನ ಇತಿಹಾಸ ಅಂದರೆ ಬ್ರಾಹ್ಮಣ್ಯ ಮತ್ತು ಬೌದ್ಧ, ದ್ರಾವಿಡರು ಮತ್ತು ಆರ್ಯರು, ವೈದಿಕ ಮತ್ತು ಅವೈದಿಕರ ನಡುವಿನ ಸಂಘರ್ಷ ಆಗಿದೆ ಎಂದು ಮೈಸೂರು ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದ್ದಾರೆ.
ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲೆ ಆಶ್ರಯದಲ್ಲಿ ಅಹಿಂದ ಕುಲಗಳಿಂದ ಉಡುಪಿ ಬನ್ನಂಜೆ ಶ್ರೀನಾರಾಯಣ ಗುರು ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬ ಮಹಿಷ ಮಹೋತ್ಸವ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಸುರ ಅಂದರೆ ದೈತ್ಯ, ದಾನವ, ರಕ್ಷಕ ಎಂಬುದು ಅರ್ಥ. ಮಹಿಷಾಸುರ ಎಲ್ಲ ಆದಿವಾಸಿಗಳ ನಾಯಕನಾಗಿದ್ದರು. ನಮ್ಮಲ್ಲಿ ಇತಿಹಾಸದ ಬಗ್ಗೆ ಜಾಗೃತಿ ಮೂಡಿ ನಾವು ಎಚ್ಚೆತ್ತುಕೊಂಡರೇ ಮಾತ್ರ ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯ. ಆದರೆ ಇಂದು ನಮ್ಮನ್ನು ಜಾಗೃತರಾಗಲು ಬಿಡುತ್ತಿಲ್ಲ. ನಮ್ಮ ಬಾಯಲ್ಲಿ ಭೀಮವಾದ, ಮನೆ ಗಳಲ್ಲಿ ಮನುವಾದ ಆಚರಣೆ. ಈ ಮನುವಾದ ಇರುವಲ್ಲಿ ಅಂಬೇಡ್ಕರ್, ಬುದ್ಧ ಹೇಗೆ ಜೀವಂತ ಇರಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಮಹಿಷ ಅಂದರೆ ನಮ್ಮ ಹೆಮ್ಮೆ. ನಮ್ಮ ಸಾಂಸ್ಕೃತಿಕ ನಾಯಕರುಗಳಾದ ರಾವಣಾಸುರ, ರಂಬಾಸುರ, ಮೂಕಾಸುರ, ಬಕಾಸುರ, ಹಿಂಡಬಸುರ ಮಹಿಷಸುರ, ಬಲಿಚಕ್ರವರ್ತಿ ಸೇರಿದಂತೆ ಅಸುರ ಪರಂಪೆಯನ್ನು ಕೊಂದ ದಿನವನ್ನು ಇಂದು ಸಂಭ್ರಮಿಸಲಾಗುತ್ತಿದೆ. ಈ ದಿನ ದುಃಖ ಪಡಬೇಕಾ ದವರು ಕೂಡ ಈ ಸಂಭ್ರಮದಲ್ಲಿ ಭಾಗಿಯಾಗುತ್ತಿರುವುದು ದುರಂತ ಎಂದು ಅವರು ಟೀಕಿಸಿದರು.
ಪರಂಪರೆ, ಚರಿತ್ರೆ, ಸಂಸ್ಕೃತಿಯ ಅರಿವು ಇಲ್ಲದ ಸಮುದಾಯವು ಅಧಿಕಾರ ಮತ್ತು ಹಕ್ಕುಗಳಿಂದ ಸಂಪೂರ್ಣ ವಂಚಿತರಾಗಿ ಶಾಶ್ವತವಾಗಿ ನಾಶ ವಾಗುತ್ತದೆ. ಈ ದೇಶವನ್ನು ಕಟ್ಟಿದ ಮೂಲನಿವಾಸಿಗಳು ಇಂದು ಬೀದಿಯಲ್ಲಿದ್ದರೆ, ಹೊರಗಿನಿಂದ ಬಂದವರು ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇದಕ್ಕೆ ಕಾರಣ ನಾವು ನಮ್ಮ ಇತಿಹಾಸ ವನ್ನು ಅಧ್ಯಯನ ಮಾಡದೇ ಇರುವುದು. ಇದು ನಮಗೆ ನಾವೇ ಮಾಡಿರುವ ದ್ರೋಹ, ವಂಚನೆಯಾಗಿದೆ ಎಂದು ಅವರು ತಿಳಿಸಿದರು.
ಕಸ ಗುಡಿಸುವವರ ಮಗಳು ಕಸ ಗುಡಿಸಬೇಕು ಎಂಬುದು ಮನು ಸಂವಿಧಾನ ಹೇಳಿದರೆ ಕಸ ಗುಡಿಸುವವರ ಮಗಳು ಜಿಲ್ಲಾಧಿಕಾರಿ ಆಗಬಹುದು ಎಂಬುದನ್ನು ಅಂಬೇಡ್ಕರ್ ಸಂವಿಧಾನ ಹೇಳುತ್ತದೆ. ಆದುದರಿಂದ ನಾವು ಅಂಬೇಡ್ಕರ್ ಸಂವಿಧಾನವನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಸ್ವಾಮೀಜಿ ಹೇಳಿದರು.
ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಮಲೆನಾಡು ಕರಾವಳಿ ಜನಪರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ, ಹಿರಿಯ ಚಿಂತಕ ನಾರಾಯಣ ಮಣೂರು ಮಾತನಾಡಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ದಲಿತ ದೌರ್ಜನ್ಯ ಜಾಗೃತಿ ಸಮಿತಿಯ ನಿರ್ದೇಶಕ ಯು.ಪರಮೇಶ್ವರ್ ಹಾಗೂ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರನ್ನು ಸನ್ಮಾನಿಸಲಾಯಿತು. ದಸಂಸ ಉಡುಪಿ ಜಿಲ್ಲಾ ಸಂಚಾಲಕ ವಾಸುದೇವ ಮದ್ದೂರು, ಅಂಬೇಡ್ಕರ್ ಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು ಉಪಸ್ಥಿತರಿದ್ದರು.
ಜನಪರ ಹೋರಾಟಗಾರ ಜಯನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದಯಾಕರ ಮಲ್ಪೆ ಸ್ವಾಗತಿಸಿದರು. ರವಿರಾಜ್ ಲಕ್ಷ್ಮೀನಗರ ವಂದಿಸಿದರು. ರಾಘು ಶಿರೂರು ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಕಲಾವಿದ ಶಂಕರ್‌ದಾಸ್ ಚೇಂಡ್ಕಳ ತಂಡ ಕ್ರಾಂತಿಗೀತೆಗಳನ್ನು ಪ್ರಸ್ತುತ ಪಡಿಸಿತು.
‘ಮತದಾನದ ಹಕ್ಕು ಕಿತ್ತುಕೊಳ್ಳಲು ಸಂಚು’
ಈ ದೇಶದ ಬಹುಜನರು ಆಳುವ ದೊರೆಗಳು ಆಗಬೇಕೆ ಹೊರತು ಗುಲಾಮರಲ್ಲ. ಆಳುವ ಸಮುದಾಯದ ಲಕ್ಷಣ ಸ್ವಾಭಿಮಾನ ಮತ್ತು ಘನತೆ. ಅದು ಬಿಟ್ಟು ಗುಲಾಮಗಿರಿಯ ಅಲ್ಲ. ಮೂಲನಿವಾಸಿಗಳನ್ನು ಮೂಲೆಗುಂಪು ಮಾಡಿ, ಅನಾಥರನ್ನಾಗಿಸಲಾಗಿದೆ. ಅವರ ಮತದಾನದ ಹಕ್ಕನ್ನು ಕಿತ್ತು ದೇಶದ್ರೋಹಿಗಳನ್ನಾಗಿ ಮಾಡುವ ಸಂಚು ನಡೆಯುತ್ತಿದೆ ಎಂದು ಮೈಸೂರು ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಆರೋಪಿಸಿದರು.
ಚರಿತ್ರೆಯಲ್ಲಿ ಮೂಲನಿವಾಸಿಗಳನ್ನು ಊರಿನಿಂದ ಹೊರಗಿಟ್ಟರೆ, ಇವತ್ತು ಹಕ್ಕು, ಅಧಿಕಾರಿಗಳಿಂದ ವಂಚಿತರನ್ನಾಗಿಸಿ ಶಾಶ್ವತವಾಗಿ ದೂರ ಇಡುತ್ತಿದ್ದಾರೆ. ಇಂದು ಇಡೀ ದೇಶದ ಸಂಪತ್ತು, ಮೂಲಭೂತ ಹಕ್ಕು, ಕರ್ತವ್ಯಗಳು ನಾಶ ವಾಗುತ್ತಿವೆ. ಇನ್ನೊಂದೆಡೆ ದೇಶ ಹೊತ್ತಿ ಉರಿಯುತ್ತಿದೆ. ಈ ಬಗ್ಗೆ ಯಾರು ಮಾತನಾಡುತ್ತಿಲ್ಲ. ಇದಕ್ಕೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮಾಧ್ಯಮರಂಗಗಳು ನಿಷ್ಟ್ಕೀಯವಾಗಿರುವುದೇ ಕಾರಣ. ಈ ಮೂಲಕ ನಮ್ಮ ಧ್ವನಿಯನ್ನು ಅಡಗಿಸುವ ಕಾರ್ಯ ನಡೆಯುತ್ತಿದೆ ಎಂದರು.
‘ಮಹಿಷ ಮಂಡಲದ ಒಡೆಯನಾಗಿರುವ ಮಹಿಷನ ಸ್ಮರಣೆ ಮಾಡುವುದು ನಿಜವಾದ ಇತಿಹಾಸವಾಗಿದೆ. ಅಸುರ ಪರಂಪರೆಯನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಜಬ್ದಾರಿಯಾಗಿದೆ. ಇದು ನಮ್ಮ ಚರಿತ್ರೆ, ಸಂಸ್ಕೃತಿಯ ಮರುಸೃಷ್ಠಿಯೇ ಹೊರತು ಯಾವುದೇ ಸರಕಾರ, ಧರ್ಮಗಳಿಗೆ ಪರ್ಯಾಯವಾದ ಆಚರಣೆ ಅಲ್ಲ. ನಮ್ಮ ಸಂಸ್ಕೃತಿ, ನಾಯಕರ ಹಬ್ಬವನ್ನು ನಾವು ಆಚರಿಸುತ್ತೇವೆ. ನಿಮ್ಮ ಹಬ್ಬವನ್ನು ನೀವು ಆಚರಿಸಿ. ಆದರೆ ನಮ್ಮ ಸಾಂಸ್ಕೃತಿಕರನ್ನು ರಾಕ್ಷಸರು ಎಂಬುದಾಗಿ ಪ್ರತಿಂಬಿಸುವುದು ನಾವು ಒಪ್ಪಲ್ಲ’
-ಜ್ಞಾನ ಪ್ರಕಾಶ ಸ್ವಾಮೀಜಿ, ಮೈಸೂರು ಉರಿಲಿಂಗ ಪೆದ್ದಿಮಠ