ಉಡುಪಿ ಉಚ್ಚಿಲ ದಸರಾ -2026 ಸಂಭ್ರಮಕ್ಕೆ ಅದ್ದೂರಿ ಚಾಲನೆ
ಕಾಪು, ಅ.11: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುವ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ 2026ಕ್ಕೆ ರವಿವಾರ ಅದ್ದೂರಿಯ ಚಾಲನೆ ನೀಡಲಾಯಿತು.
ಉಡುಪಿ ಉಚ್ಚಿಲ ದಸರಾಕ್ಕೆ ಚಾಲನೆ ನೀಡಿದ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ನಮ್ಮನ್ನು ನಾವು ಜಾಗೃತಗೊಳಿಸಿ, ನಮ್ಮೊಳಗಿನ ಶಕ್ತಿಗೆ ಪ್ರೇರಣೆ ನೀಡಲು ನವರಾತ್ರಿ ಆಚರಣೆ ಅಗತ್ಯ. ಈ ಹಬ್ಬದ ಪ್ರೇರಣೆ ಯೊಂದಿಗೆ ಸಕಾರಾತ್ಮಕತೆ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ. ಶಂಕರಕ್ ಮಾತನಾಡಿ, ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗಿ ನಡೆಯುತಿದ್ದು, ಈ ಭಾರಿ ಅತ್ಯಂತ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ದಸರಾ ಆಯೋಜಿಸಲಾಗಿದೆ. ಈ ದಸರಾ ಕಾರ್ಯಕ್ರಮ ಇನ್ನಷ್ಟು ಸಂಭ್ರಮದಿಂದ ನಡೆಯಲು ಎಲ್ಲರ ಸಹಕಾರಿ ಅತೀ ಅಗತ್ಯ ಎಂದು ತಿಳಿಸಿದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾ ಶರತ್, ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಜಂಟಿ ಕಾರ್ಯದರ್ಶಿ ಸುಜಿತ್ ಸಾಲ್ಯಾನ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂರ್ದ, ನಾಲ್ಕುಪಟ್ನ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಂಘದ ಅಧ್ಯಕ್ಷೆ ಸುಗುಣ ಕರ್ಕೇರ, ಸತೀಶ್ ಅಮೀನ್ ಪಡುಕರೆ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಉದಯಪೂಜೆ, ಧಾನ್ಯಲಕ್ಷ್ಮೀ ಪೂಜೆ, ನಿತ್ಯಚಂಡಿಕಾ ಹೋಮ ನಡೆಯಿತು. ಆ ಬಳಿಕ ಶ್ರೀ ಕ್ಷೇತ್ರದ ತಂತ್ರಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಶ್ರೀಕ್ಷೇತ್ರದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ಬೆಳಗ್ಗೆ ನವದುರ್ಗೆಯರು ಹಾಗೂ ಶ್ರೀಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನ ನವದುರ್ಗೆಯರಿಗೆ ಮಹಾ ಮಂಗಳ ರಾತಿ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಪ್ರಸಾದ ವಿತರಣೆ, ನವದುರ್ಗೆಯರಿಗೆ ರಾತ್ರಿ ಮಹಾಪೂಜೆ, ಶ್ರೀದುರ್ಗಾ ಕಲ್ಪೋಕ್ತ ಪೂಜೆ ನಡೆಯಿತು.
ವಸ್ತುಪ್ರದರ್ಶನ ಉದ್ಘಾಟನೆ
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಹೊರಾಂಗಣದಲ್ಲಿ ಉಡುಪಿ ಉಚ್ಚಿಲ ದಸರಾ ಮಹೋತ್ಸವದ ಪ್ರಯುಕ್ತ ಆಯೋಜಿಸಲಾದ ವಸ್ತುಪ್ರದರ್ಶನವನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ದಸರಾ ರೂವಾರಿ ಜಿ.ಶಂಕರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.