ಕಾರು ಢಿಕ್ಕಿ: ಬೈಕ್ ಸಹಸವಾರ ಮೃತ್ಯು
ಕಾಪು: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸಹ ಸವಾರರೊಬ್ಬರು ಮೃತಪಟ್ಟ ಘಟನೆ ಕಟಪಾಡಿ ವಿಜಯ ಇಂಡಸ್ಟ್ರಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅ.25ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಬಿಜಾಪುರ ಮೂಲದ ಶಿರ್ವ ನಿವಾಸಿ ಸುನೀಲ್ ಪಾಟೀಲ್ (19) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಶಿರ್ವದ ಅನಂತಪದ್ಮನಾಭ ಗಂಭೀರವಾಗಿ ಗಾಯಗೊಂಡು ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರಿಬ್ಬರು ವೈಯಕ್ತಿಕ ಕೆಲಸಕ್ಕಾಗಿ ಕಟಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬೈಕಿಗೆ ಉಡುಪಿ ಕಡೆಯಿಂದ ಅತೀ ವೇಗ ಹಾಗೂ ಅಜಾಗೂರುಕತೆಯಿಂದ ಚಲಾಯಿಸಿಕೊಂಡು ಬಂದ ಕಾರು ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಬೈಕ್ ತಿರುಗಿ ಡಿವೈಡರ್‌ಗೆ ಡಿಕ್ಕಿ ಹೊಡೆಯಿತು. ಇದರ ಪರಿಣಾಮ ಸುನಿಲ್ ಪಾಟೀಲ್ ರಸ್ತೆಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.